ಮಂಜುನಾಥ ಕೆ.ಎಂ.
ಕಳೆದ ಮೂರು ವರ್ಷಗಳಲ್ಲಾದ ಪ್ರಕರಣಗಳ ಏರಿಕೆ ಗಮನಿಸಿದರೆ ಪೋಕ್ಸೊ ಕಾಯ್ದೆ ಬಗ್ಗೆ ಇನ್ನು ಸಾಕಷ್ಟು ಜಾಗೃತಿಯ ಅಗತ್ಯವಿದ್ದು ಶಾಲಾ-ಕಾಲೇಜುಗಳು, ಗ್ರಾಮೀಣ ಭಾಗಗಳಲ್ಲಿ ಕಾಯ್ದೆ ಕುರಿತು ಅರಿವು ಮೂಡಿಸಬೇಕಾಗಿದೆ. ಇನ್ನು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಸಹ ಗಣನೀಯವಾಗಿ ಹೆಚ್ಚಳವಾಗಿದ್ದು, ಅಪ್ರಾಪ್ತ ವಯಸ್ಸಿನಲ್ಲಿಯೇ ಮಕ್ಕಳಿಗೆ ದಾಂಪತ್ಯದ ಜವಾಬ್ದಾರಿ ನೀಡುವ ವಿಲಕ್ಷಣ ಪ್ರಕರಣಗಳು ಬೆಳಕಿಗೆ ಬಂದಿವೆ.
ಬಾಲ್ಯವಿವಾಹ ತಡೆಗಟ್ಟಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಾಕಷ್ಟು ಕ್ರಮ ವಹಿಸುತ್ತಿದೆಯಾದರೂ ಕದ್ದುಮುಚ್ಚಿ ಮಾಡುವ ಮದುವೆಗಳನ್ನು ನಿಯಂತ್ರಿಸಲು ಕಷ್ಟಸಾಧ್ಯ. ಬಾಲ್ಯದಲ್ಲಿಯೇ ಹೆಣ್ಣುಮಕ್ಕಳನ್ನು ದಾಂಪತ್ಯಕ್ಕೆ ದೂಡುವ ಪೋಷಕರ ನಿರ್ಧಾರಗಳು ಮಕ್ಕಳ ಭವಿಷ್ಯಕ್ಕೆ ಕುತ್ತು ತಂದೊದಗಿದೆ. ಅನೇಕ ಕಡೆಗಳಲ್ಲಿ ಮದುವೆ ಮನೆಗಳಿಗೆ ತೆರಳಿದ ಮಕ್ಕಳ ರಕ್ಷಣಾ ಅಧಿಕಾರಿಗಳು ಬಾಲ್ಯವಿವಾಹ ತಡೆದು, ಪ್ರಕರಣ ದಾಖಲಿಸಿದ ಉದಾಹರಣೆಗಳಿವೆ.ಪೋಕ್ಸೊ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳೇನು?:
ಅನೇಕ ಪ್ರಕರಣಗಳು ಪೊಲೀಸ್ ಠಾಣೆ ಹತ್ತುವ ಮುನ್ನವೇ ಸ್ಥಳೀಯ ಮುಖಂಡರೊಂದಿಗೆ ರಾಜಿ ನಡೆಯುತ್ತವೆ. ಸಂಧಾನ ಫಲ ನೀಡದೇ ಹೋದಲ್ಲಿ ಪ್ರಕರಣ ದಾಖಲಾಗಿ, ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಯುವಕ ಜೈಲು ಪಾಲಾಗುತ್ತಾನೆ. ಪೋಕ್ಸೊ ಪ್ರಕರಣ ಹೆಚ್ಚಾಗಲು ಅನಕ್ಷರತೆ, ಕಾನೂನು ಅರಿವಿನ ಕೊರತೆ ಹಾಗೂ ಬಡತನ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಪೋಕ್ಸೊ ಪ್ರಕರಣದಲ್ಲಿ ಸಿಲುಕಿಕೊಂಡವರ ಪೈಕಿ ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಮೂರೂವರೆ ವರ್ಷಗಳಲ್ಲಿ 154 ಪೋಕ್ಸೊ ಕೇಸು:
2021-22ರಲ್ಲಿ 158 ಬಾಲ್ಯವಿವಾಹ ತಡೆಗಟ್ಟಲಾಗಿದೆ. 142 ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. 12 ಎಫ್‌ಐಆರ್ ದಾಖಲಾಗಿದ್ದು, 4 ವಿವಾಹಗಳು ನಡೆದಿವೆ. 2022-23ರಲ್ಲಿ 101 ಬಾಲ್ಯವಿವಾಹ ತಡೆಗಟ್ಟಲಾಗಿದೆ. 6 ವಿವಾಹಗಳು ನಡೆದಿದ್ದು, 107 ಪ್ರಕರಣಗಳು ದಾಖಲಾಗಿವೆ.
ಪೋಕ್ಸೊ ಹಾಗೂ ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟಲು ಜನರಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ-ಕಾಲೇಜಗಳಲ್ಲಿ ಅರಿವು ಮೂಡಿಸಿ, ಕಾನೂನಿನ ನೆರವು ಹಾಗೂ ಕ್ರಮಗಳ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಬಳ್ಳಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಕೆ. ಜಲಾಲಪ್ಪ.