ಜಿಲ್ಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ಪ್ರಕರಣ ಹೆಚ್ಚಳ

KannadaprabhaNewsNetwork |  
Published : Oct 29, 2024, 12:45 AM ISTUpdated : Oct 29, 2024, 12:46 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ: ಜಿಲ್ಲೆಯಲ್ಲಿ ಫೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಕಳವಳ ವ್ಯಕ್ತಪಡಿಸಿದರು.

ಚಿತ್ರದುರ್ಗ: ಜಿಲ್ಲೆಯಲ್ಲಿ ಫೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಕಳವಳ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಡಾನ್ ಬಾಸ್ಕೋ ಶಾಲೆ ಸಹಯೋಗದಲ್ಲಿ ಸೋಮವಾರ ನಗರದ ಡಾನ್‌ಬಾಸ್ಕೋ ಶಾಲೆಯಲ್ಲಿ ಆಯೋಜಿಸಲಾಗಿದ್ದ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದರು. ಅಕ್ಟೋಬರ್ 11 ರಂದು ಪ್ರತಿ ವರ್ಷ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಿಸಲಾಗುತ್ತಿದೆ. ‘ಗರ್ಲ್ಸ್ ವಿಜನ್ ಫಾರ್ ದಿ ಫ್ಯೂಚರ್’ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಬಗ್ಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆ ಈ ಧ್ಯೇಯವಾಕ್ಯವನ್ನು ಘೋಷಿಸಿದೆ. ಇದರೊಂದಿಗೆ ಹೆಣ್ಣು ಮಕ್ಕಳ ಹಕ್ಕುಗಳ ಕುರಿತಾಗಿ ಕಾನೂನು ಜಾಗೃತಿಯನ್ನು ಸಹ ಮೂಡಿಸುವ ಉದ್ದೇಶ ಹೊಂದಿದೆ. ಸರ್ಕಾರದ ಹಲವು ಅಂಗಸ್ಥೆಗಳು ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ಹೆಣ್ಣು ಮಕ್ಕಳು ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ತಿಳಿದುಕೊಳ್ಳಬೇಕು. ತರಗತಿ, ಶಾಲೆ, ಮನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ವಿಷಮ ಪರಿಸ್ಥಿತಿಗಳು ಎದುರಾದರೆ ನಿಮ್ಮ ಘನತೆ ರಕ್ಷಿಸಿಕೊಳ್ಳುವ ಎಲ್ಲಾ ಹಕ್ಕುಗಳು ನಿಮಗಿವೆ ಎಂದು ಹೇಳಿದರು. ಡಾನ್ ಬಾಸ್ಕೋ ಪ್ರೌಢ ಶಾಲಾ ಪ್ರಾಂಶುಪಾಲ ಉದಯ ಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಸಮಾಜದಲ್ಲಿ ತಮ್ಮ ಹಕ್ಕುಗಳನ್ನು ಅರಿತು ಸಮಾನತೆಯಿಂದ ಜೀವನ ನಡೆಸಬೇಕು. ಸಮಾಜದಲ್ಲಿನ ದೌರ್ಜನ್ಯ, ಬಡತನ ಹಾಗೂ ತಾರತಮ್ಯತೆಯನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ ಇಂದಿನ ಶಿಕ್ಷಣ ಕೇವಲ ಪಾಠ ಪ್ರವಚನಗಳಿಗಷ್ಟೇ ಸೀಮಿತವಾಗಿರುವುದು ದೌರ್ಭಾಗ್ಯ ಎಂದರು. ಪ್ರಮುಖವಾಗಿ ಹೆಣ್ಣು ಮಕ್ಕಳಿಗೆ ಇಂತಹ ಕಾರ್ಯಾಗಾರಗಳ ಮೂಲಕ ಅವರ ಹಕ್ಕುಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದು ಪುರುಷ ಪ್ರಧಾನ ಸಮಾಜವಾದ್ದರಿಂದ ಅನೇಕ ದೌರ್ಜನ್ಯಗಳು ಇಂದಿಗೂ ನಡೆಯುತ್ತಲೇ ಇವೆ. ತಮ್ಮ ಜೀವನದಲ್ಲಿ ಬರುವ ಇಂತಹ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣದ ಜೊತೆಗೆ ಕಾನೂನಿನ ಅರಿವನ್ನು ತಿಳಿದಿರಬೇಕು. ಭವಿಷ್ಯ ಸುಂದರವಾಗಿರಬೇಕಾದರೆ ಬಾಲ್ಯವಸ್ಥೆಯಲ್ಲಿ ಯಾವುದೇ ರೀತಿಯ ಕಿರುಕುಳ- ದೌರ್ಜನ್ಯಕ್ಕೆ ಒಳಗಾಗಬಾರದು. ಉನ್ನತ ಶಿಕ್ಷಣ ಪಡೆದು ಯಾವುದು ಸರಿ, ಯಾವುದು ತಪ್ಪು ಎಂಬುದನ್ನರಿತು ತಮ್ಮ ಭವಿಷ್ಯವನ್ನು ರೂಪಿಕೊಳ್ಳುವ ಸೈನಿಕರಾಗಬೇಕು. ಹೆಣ್ಣಿನ ಜೀವನ ಹಸನಾಗಿಸಲು ಪ್ರತಿಯೊಬ್ಬರು ಧ್ವನಿ ಎತ್ತಬೇಕು ಎಂದು ಹೇಳಿದರು. ಉಪ ಪ್ರಧಾನ ಕಾನೂನು ಅಭಿರಕ್ಷಕ ಎಂ.ಮೂರ್ತಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಬಾಲ್ಯವಿವಾಹ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ಗೆ ವಾರ್ಷಿಕ ಆದಾಯ ₹5 ಲಕ್ಷಕ್ಕೆ ಹೆಚ್ಚಿಸಿ
ರಾಜ್ಯ ಲಕ್ಷಾಂತರ ಅಕ್ರಮ ವಿದೇಶಿ ವಲಸಿಗರ ನೆಲೆ!