ಡಾ. ಡಿ.ಎಸ್. ಕರ್ಕಿ ಅವರ "ಹಚ್ಚೇವು ಕನ್ನಡದ ದೀಪ " ಗೀತೆ ಅನ್ಯಭಾಷಿಕರನ್ನೂ ಆಕರ್ಷಿಸಿದ್ದು, ಮುಸ್ಸೋರಿಯ ಐಎಎಸ್ ತರಬೇತಿ ಕೇಂದ್ರದಲ್ಲಿಯೂ ಭಾವಿ ಅಧಿಕಾರಿಗಳಿಗೆ ಕಲಿಸಲಾಗುತ್ತಿದೆ.
ಹುಬ್ಬಳ್ಳಿ:
ಡಾ. ಡಿ.ಎಸ್. ಕರ್ಕಿ ಅವರ "ಹಚ್ಚೇವು ಕನ್ನಡದ ದೀಪ " ಗೀತೆ ಅನ್ಯಭಾಷಿಕರನ್ನೂ ಆಕರ್ಷಿಸಿದ್ದು, ಮುಸ್ಸೋರಿಯ ಐಎಎಸ್ ತರಬೇತಿ ಕೇಂದ್ರದಲ್ಲಿಯೂ ಭಾವಿ ಅಧಿಕಾರಿಗಳಿಗೆ ಕಲಿಸಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕಿ ಕೀರ್ತನಾ ಎಚ್.ಎಸ್. ಹೇಳಿದರು.ಇಲ್ಲಿನ ಲಿಂಗರಾಜ ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ "ಲಿಂಗರಾಜ ನಗರ ದಸರಾ-2026 " ಉದ್ಘಾಟಿಸಿ ಮಾತನಾಡಿದ ಅವರು, ಕರ್ಕಿ ಅವರ ಕವಿತೆಗಳು ಕನ್ನಡ ಭಾಷೆಯ ಮೇಲಿನ ಅಭಿಮಾನ ಹೆಚ್ಚಿಸುವ ಜತೆಗೆ ಕೇಳುಗರಲ್ಲಿ ರೋಮಾಂಚನ ಮೂಡಿಸುತ್ತವೆ. ಇಂತಹ ಮೇರು ಕವಿ ನೆಲೆಸಿದ್ದ ಬಡಾವಣೆಯ ದಸರಾ ಉದ್ಘಾಟಿಸುವುದು ಸೌಭಾಗ್ಯ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಪದಕ ವಿಜೇತೆ ಹಾಗೂ ವಿಶ್ವಸಂಸ್ಥೆಯ ಸಲಹೆಗಾರ್ತಿ ದೀಪಾಲಿ ಗೋಟಡಿಕೆ ಮಾತನಾಡಿ, ಮಹಿಳೆಯರು ಮನೆಯಲ್ಲಿಯೇ ಉದ್ಯಮ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ತಾಯಂದಿರು ಮಕ್ಕಳಲ್ಲಿ ಕನಸುಗಳನ್ನು ಬಿತ್ತುವ ಜತೆಗೆ ತಾವೂ ಉದ್ಯೋಗದಾತರಾಗಿ, ಮಕ್ಕಳನ್ನೂ ಭವಿಷ್ಯದ ಉದ್ಯೋಗದಾತರನ್ನಾಗಿ ರೂಪಿಸಬೇಕು ಎಂದರು.
ಇದೇ ವೇಳೆ ಬಳಿಕ ಮಹಿಳೆಯರಿಂದ ದಾಂಡಿಯಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮಾಸ್ಟರ್ ರಾಕಿ (ರಾಘವೇಂದ್ರ) ದಾಂಡಿಯಾ ನಡೆಸಿಕೊಟ್ಟರು.ಎಂ.ಕೆ. ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ನಿರ್ಮಲಾ ಝಳಕಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಾಜೇಂದ್ರ ರಡ್ಡಿ ಸ್ವಾಗತಿಸಿದರು. ಸಿದ್ದು ಕಪ್ಪಾಳಿ ಹಾಗೂ ವೀರು ಉಪ್ಪಿನ್ ಪರಿಚಯಿಸಿದರು. ಸಂಗಮೇಶ ಮೆಣಸಿನಕಾಯಿ ನಿರೂಪಿಸಿದರು. ಸುಚಿತ್ ಅಂಗಡಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.