ಕವಿತೆಗಳು ವರ್ತಮಾನದ ತುರ್ತು ಅರ್ಥೈಸಬೇಕು

KannadaprabhaNewsNetwork | Published : Jan 18, 2024 2:08 AM

ಸಾರಾಂಶ

ರಾಮನಗರ: ವರ್ತಮಾನದ ತುರ್ತುಗಳನ್ನು ಅರ್ಥ ಮಾಡಿಕೊಂಡು ಹುಟ್ಟಿದ ಕವಿತೆ ಸದಾಕಾಲ ಉಳಿಯುತ್ತದೆ. ಪೂರ್ವ ಸೂರಿಗಳ ಆಲೋಚನಾ ಕ್ರಮಗಳನ್ನು ಅರ್ಥೈಸಿಕೊಂಡು ರಚಿತವಾಗುವ ಕಾವ್ಯಕ್ಕೆ ನೆಲೆ,ಬೆಲೆ ಇರುತ್ತದೆ. ಸೃಜನಶೀಲ ಕ್ರಿಯೆಯಾದ ಕವಿತೆಯ ಕಟ್ಟುವಿಕೆಯಲ್ಲಿ ಕವಿಯ ಕಾಣಿಕೆ ಅಡಕವಾಗಿರುತ್ತದೆ ಎಂದು ಸಾಹಿತಿ ಡಾ. ಎಂ.ಬೈರೇಗೌಡ ಹೇಳಿದರು.

ರಾಮನಗರ: ವರ್ತಮಾನದ ತುರ್ತುಗಳನ್ನು ಅರ್ಥ ಮಾಡಿಕೊಂಡು ಹುಟ್ಟಿದ ಕವಿತೆ ಸದಾಕಾಲ ಉಳಿಯುತ್ತದೆ. ಪೂರ್ವ ಸೂರಿಗಳ ಆಲೋಚನಾ ಕ್ರಮಗಳನ್ನು ಅರ್ಥೈಸಿಕೊಂಡು ರಚಿತವಾಗುವ ಕಾವ್ಯಕ್ಕೆ ನೆಲೆ,ಬೆಲೆ ಇರುತ್ತದೆ. ಸೃಜನಶೀಲ ಕ್ರಿಯೆಯಾದ ಕವಿತೆಯ ಕಟ್ಟುವಿಕೆಯಲ್ಲಿ ಕವಿಯ ಕಾಣಿಕೆ ಅಡಕವಾಗಿರುತ್ತದೆ ಎಂದು ಸಾಹಿತಿ ಡಾ. ಎಂ.ಬೈರೇಗೌಡ ಹೇಳಿದರು.

ತಾಲೂಕಿನ ಕವಣಾಪುರದ ಬಸವಣ್ಣ ದೇಗುಲದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯರಲ್ಲೂ ಒಬ್ಬ ಕವಿ ಇರುತ್ತಾನೆ. ಆದರೆ, ಅಭಿವ್ಯಕ್ತಿಸುವ ಶಕ್ತಿ ಇರುವವರು ಮಾತ್ರ ಅದನ್ನು ದಾಖಲಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುತ್ತಾರೆ. ಹೀಗೆ ನಿರ್ಮಾಣವಾದ ಕಾವ್ಯದ ಗಟ್ಟಿತನ ಅದು ಎಷ್ಟು ಕಾಲ ಉಳಿಯಬಲ್ಲದು ಎಂಬುದರ ಮೇಲೆ ನಿರ್ಣಯವಾಗುತ್ತದೆ ಎಂದರು.

ಕಾವ್ಯ ಕಟ್ಟುವುದು ಎಂದರೆ ಕುಶಲಿಯೊಬ್ಬನ ಕುಸುರಿ ಕೆಲಸದಂತೆ, ಇಡೀ ಸಮಾಜವನ್ನೇ ಬದಲಿಸುವ ಶಕ್ತಿ ಕಾವ್ಯಕ್ಕಿರುತ್ತದೆ. ಅಂತಹ ಕಾವ್ಯದ ರಚನೆಯ ಅವಶ್ಯಕತೆಯಿದೆ ಎಂದು ಕಾವ್ಯದ ವಿವಿಧ ಮಜಲುಗಳನ್ನು ವಿವರಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಪ್ರೀತಿ, ಪ್ರೇಮಗಳನ್ನು ಮೀರಿದ ಕಾವ್ಯರಚನೆಯ ಅಗತ್ಯವಿದೆ. ಕೇವಲ ನಾನು ಕವಿಯಾಗಬೇಕೆಂಬ ಇರಾದೆಯಿದ್ದರೆ ಸಾಲದು, ಆಂತರ್ಯದ ತುಡಿತ ಕಾವ್ಯ ಸೃಷ್ಟಿಗೆ ಪೂರಕ ಎಂದು ಹೇಳಿದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕವಿಗಳಾದ ಅರುಣ್ ಕವಣಾಪುರ, ವಿ.ಪಿ. ವರದರಾಜ್, ಗೊಲ್ಲರದೊಡ್ಡಿಯ ಪಿ.ಎನ್. ಅನಂತನಾಗ್, ಎಂ.ಎಲ್. ಪುನೀತ್‌ಕುಮಾರ್, ಸಿ.ಸುರೇಶ್ , ಯೋಗೇಶ್ ದ್ಯಾವಪಟ್ಟಣ, ಡಾ. ಹೇಮಂತ ಕುಮಾರ್, ಎಂ.ಸಿ. ಐಶ್ವರ್ಯ, ಕಿರಣ್, ಮೇದರದೊಡ್ಡಿ ಹನುಮಂತು, ಕಿರಣ್‌ ರಾಜ್ ತುಂಬೇನಹಳ್ಳಿ, ಚೇತನ್ ಗುನ್ನೂರು, ಶರತ್, ಹರೀಶ್ ವೈವಿಧ್ಯಮಯವಾದ ಸ್ವರಚಿತ ಕವನಗಳನ್ನು ವಾಚಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಕೆ. ಶಿವಲಿಂಗಯ್ಯ, ಕಸಾಪ ಜಿಲ್ಲಾ ಗೌರವ ಕೊಶಾಧ್ಯಕ್ಷ ರಾಜೇಶ್ ಕವಣಾಪುರ, ಚನ್ನಪಟ್ಟಣ ಘಟಕ ಅಧ್ಯಕ್ಷ ಮತ್ತಿಕೆರೆ ಚಲುವರಾಜು, ಚೌಪು ಸ್ವಾಮಿ ಉಪಸ್ಥಿತರಿದ್ದರು.

15ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕಿನ ಕವಣಾಪುರದ ಬಸವಣ್ಣ ದೇಗುಲದ ಆವರಣದಲ್ಲಿ ನಡೆದ ಸಂಕ್ರಾಂತಿ ಕವಿಗೋಷ್ಠಿಯನ್ನು ಅತಿಥಿಗಳು ಉದ್ಘಾಟಿಸಿದರು.

Share this article