ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆಯಲ್ಲಿ ಭಾನುವಾರ ಅಧ್ಯಕ್ಷರಾಗಿ ಪದ ಗ್ರಹಣ ಮಾಡಿ ಮಾತನಾಡಿ, ಪುತಿನ ಕಾವ್ಯ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ಅವರ ಹೆಸರು ನಿತ್ಯ ನೂತನವಾಗಿರುವಂತೆ ಕಾರ್ಯಕ್ರಮಗಳನ್ನು ಟ್ರಸ್ಟ್ ರೂಪಿಸುತ್ತದೆ ಎಂದರು.
ಕವಿ ಪುತಿನರ ಸಾಹಿತ್ಯದಿಂದ ನಾಡಿಗೆ ಕೊಡುಗೆಯಾಗಬೇಕಿದೆ. ಕವಿಗಳಾದ ಕುವೆಂಪು, ಬೇಂದ್ರೆ ಪುತಿನ ನವೋದಯ ಸಾಹಿತ್ಯದ ರತ್ನತ್ರಯರು. ಪುತಿನ ಸಾಹಿತ್ಯದ ಅಧ್ಯಯನ ಮಾಡಿದರೆ ಅವರ ಕಾವ್ಯದ ಚಿಂತನೆಗಳು ಅರ್ಥವಾಗುತ್ತದೆ ಎಂದರು.ಬದುಕು ಲಘುವಾಗಿರಬೇಕು ಎಂಬ ಅವರ ಕಾವ್ಯ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ. ಅವರ ಆಧ್ಯಾತ್ಮಿಕ ಹಾಗೂ ವೈಚಾರಿಕ ಚಿಂತನೆಗಳು ರಸಮಯ ಕಾವ್ಯಸ್ವರೂಪ ಪಡೆದುಕೊಂಡಿವೆ. ಹೀಗಾಗಿ ಅವರ ವಿಚಾರಧಾರೆಗಳು ಸಮಾಜಮುಖಿಯಾಗಿದ್ದು ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಯಾವುದೇ ಅಧಿಕಾರವಿಲ್ಲದೆ ಶಿಕ್ಷಕನಾಗಿ ಸೇವೆ ಮಾಡಿದ ನಾನು ಸಮಾಜಕ್ಕೆ ಅಳಿಲುಸೇವೆ ಮಾಡಿದ್ದೇನೆ. ಪುತಿನ ಟ್ರಸ್ಟ್ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಪುತಿನ ಸಾಹಿತ್ಯವನ್ನು ಪ್ರಚಾರ ಮಾಡುವ ಮೂಲಕ ಭಾಷಾ ಬೆಳವಣಿಗೆಗೆ ಸೇವೆಮಾಡುವ ಆಶಯ ನಮ್ಮದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತಿನ ಪುತ್ರಿ ಹಾಗೂ ಖ್ಯಾತ ಸಾಹಿತಿ ಅಲಮೇಲು ಮಾತನಾಡಿ, ಅಮೆರಿಕಾದಲ್ಲಿ ಪುತಿನ ಗೀತ ರೂಪಕಗಳಿಗೆ ದೃಶ್ಯ ವೈಭವವವನ್ನು ನೀಡಿ ಪ್ರದರ್ಶಿಸುವ ಕಾರ್ಯ ಮಾಡಲಾಗುತ್ತದೆ. ಅಲ್ಲಿ ಕನ್ನಕ ಸಂಘ ಮಾಡಿ ನಿರಂತರವಾಗಿ ಕನ್ನಡ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷೆ ಹಾಗೂ ಮಂಡ್ಯದ ಎಸ್.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ, ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷರಾದ ಕಿಕ್ಕೇರಿ ಕೃಷ್ಣಮೂರ್ತಿ. ಕವಿ ಪುತಿನ ಟ್ರಸ್ಟ್ ಸದಸ್ಯರಾದ ಬಿ.ಎನ್ ಸುರೇಶ್, ಡಾ.ಸುಮಾರಾಣಿ ಶಂಭು, .ಕೆ.ಜಿ. ನಾರಾಯಣ, ಕೊಪ್ಪಕುಮಾರ್, ಟಿ.ಚಂದ್ರೇಗೌಡ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.