ಸಂಕಟ-ಪ್ರೀತಿಯಿಂದ ಕವಿತೆ ಹುಟ್ಟುತ್ತದೆ ಹೊರತು ಅಹಂಕಾರದಿಂದಲ್ಲ-ಡಾ. ಸತ್ಯಾನಂದ

KannadaprabhaNewsNetwork | Published : Apr 28, 2025 12:52 AM

ಸಾರಾಂಶ

ಕಾವ್ಯಕ್ಕೆ ಕಣ್ಣಿರಬೇಕು, ಕರುಳಿರಬೇಕು ಎಲ್ಲಕ್ಕಿಂತ ಹೆಚ್ಚಾಗಿ ಕಾವ್ಯ ಹುಟ್ಟುವುದು ಸಂಕಟ ಹಾಗೂ ಪ್ರೀತಿಯ ಭಾವನೆಗಳಿಂದಲೇ ಹೊರತು ಅಹಂಕಾರದಿಂದ ಕಾವ್ಯ ಹುಟ್ಟಲು ಸಾಧ್ಯವಿಲ್ಲ ಎಂದು ಖ್ಯಾತ ಕವಿ ಡಾ. ಸತ್ಯಾನಂದ ಪಾತ್ರೋಟ ಹೇಳಿದರು.

ಗದಗ: ಕಾವ್ಯಕ್ಕೆ ಕಣ್ಣಿರಬೇಕು, ಕರುಳಿರಬೇಕು ಎಲ್ಲಕ್ಕಿಂತ ಹೆಚ್ಚಾಗಿ ಕಾವ್ಯ ಹುಟ್ಟುವುದು ಸಂಕಟ ಹಾಗೂ ಪ್ರೀತಿಯ ಭಾವನೆಗಳಿಂದಲೇ ಹೊರತು ಅಹಂಕಾರದಿಂದ ಕಾವ್ಯ ಹುಟ್ಟಲು ಸಾಧ್ಯವಿಲ್ಲ ಎಂದು ಖ್ಯಾತ ಕವಿ ಡಾ. ಸತ್ಯಾನಂದ ಪಾತ್ರೋಟ ಹೇಳಿದರು.

ಅವರು ಭಾನುವಾರ ಗದಗ ತಾಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಲಿತ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಹಕಾರ ರೇಡಿಯೋ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ದಲಿತ ಯುವ ಕಾವ್ಯ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾವ್ಯ ಇದೇ ರೀತಿ ಇರಬೇಕು ಎಂಬ ಕಟ್ಟುಪಾಡುಗಳಿಗೆ ನನ್ನ ವಿರೋಧವಿದ್ದು, ಕವಿಗಳಲ್ಲಿ ಹಿರಿಯ-ಕಿರಿಯ ಎಂಬ ಭೇದ ಇರಬಾರದು. ಮನುಷ್ಯತ್ವ ಇಲ್ಲದೆ ಕವಿಯಾಗುವುದು ಅಸಾಧ್ಯವಾಗಿದ್ದು, ಮನುಷ್ಯರ ಮನಸ್ಥಿತಿ ಬದಲಾಯಿಸುವ ಶಕ್ತಿ ಕಾವ್ಯಕ್ಕಿದೆ. ಇತ್ತೀಚಿನ ದಿನಗಳಲ್ಲಿ ಅಕ್ಷರಕ್ಕೂ ಮಡಿವಂತಿಕೆ ತಂದು ಕವಿತೆಗಳು ಹಾಗೂ ಕವಿಗಳನ್ನೂ ಸಹ ಜಾತಿ-ಧರ್ಮದ ಮಾನದಂಡದಲ್ಲಿ ವಿಭಜಿಸಲು ಹೊರಟಿರುವುದು ಆತಂಕಕಾರಿ ಸಂಗತಿ. ಕವಿ ಎನಿಸಿಕೊಂಡವನಿಗೆ ತನ್ನ ಸುತ್ತಲಿನ ಪರಿಸರ ಕಾಡಬೇಕು, ಈ ಕಾಡುವಿಕೆಯೇ ಕವಿತೆ ಕಟ್ಟುವಿಕೆಗೆ ಮೂಲವಾಗಿದೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಮಾತನಾಡಿ, ನಮ್ಮ ಇಲಾಖೆಯಿಂದ ಯುವ ಸಾಹಿತಿಗಳ ಅಪ್ರಕಟಿತ-ಸಗಟು ಕೃತಿಗಳಿಗೆ ಪ್ರೋತ್ಸಾಹಧನ ನೀಡತ್ತಿದ್ದು, ಆನ್‌ಲೈನ್ ಮೂಲಕ ಕವಿಗಳು ಇದಕ್ಕೆ ಅರ್ಜಿ ಸಲ್ಲಿಸಿ, ಆಯ್ಕೆ ಸಮಿತಿಯ ಮುಂದೆ ಅರ್ಜಿ ಪಾಸಾದರೇ ಈ ಸೌಲಭ್ಯ ಪಡೆದುಕೊಳ್ಳಬಹುದು. ದ.ಸಾ.ಪ ಮೌಲಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು.

ದಸಾಪ ಉಪಾಧ್ಯಕ್ಷ ಡಾ.ವೈ.ಎಂ. ಭಜಂತ್ರಿ ಮಾತನಾಡಿ, ಡಾ. ಅರ್ಜುನ ಗೊಳಸಂಗಿಯವರು ದಸಾಪವನ್ನು ಮಕ್ಕಳಂತೆ ಪ್ರೀತಿಸುತ್ತ ಬಂದಿದ್ದು, ಕಳೆದ 30 ವರ್ಷಗಳಲ್ಲಿ ಈ ಪರಿಷತ್ತು ಬೆಳೆದ ಬಂದ ಹಾದಿ ಅತ್ಯಂತ ಕಷ್ಟದಾಯಕವಾಗಿದೆ. ಯುವಜನರನ್ನು ದಲಿತ ಸಂವೇದನೆಯ ವಾರಸುದಾರರನ್ನಾಗಿಸುವ ಹಿನ್ನೆಲೆಯಲ್ಲಿ ಕಮ್ಮಟ ಹಮ್ಮಿಕೊಂಡಿದ್ದು, ಕರ್ನಾಟಕದಲ್ಲಿ ತಳಸಮುದಾಯಗಳನ್ನು ಸಾಹಿತ್ಯಿಕವಾಗಿ-ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಕಾರ್ಯವನ್ನು ದಸಾಪ ಮಾಡುತ್ತಿದೆ ಎಂದರು. ಡಾ. ಎಚ್.ಬಿ ಕೋಲ್ಕಾರ ಸ್ವಾಗತಿಸಿದರು. ದಸಾಪ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಲಿತ ಕಲಾ ಮಂಡಳಿ ಸದಸ್ಯರು ಹೋರಾಟದ ಹಾಡುಗಳನ್ನು ಹಾಡಿದರು. ಸಂವಿಧಾನ ಪೀಠಿಕೆ ಓದು ಹಾಗೂ ಬುದ್ಧ-ಬಸವ-ಡಾ.ಬಿ.ಆರ್ ಅಂಬೇಡ್ಕರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಣೆ ಮೂಲಕ ಕಾರ್ಯಕ್ರಮ ಆರಂಭವಾಯಿತು. ಶಿಬಿರದ ನಿರ್ದೇಶಕ ಡಾ.ಸದಾಶಿವ ದೊಡಮನಿ, ಸಹ ನಿರ್ದೇಶಕ ಡಾ.ಎಚ್ ಲಕ್ಷ್ಮೀನಾರಾಯಣಸ್ವಾಮಿ, ಡಾ. ಸೋಮಕ್ಕ ಎಂ, ಹಿರಿಯ ಪತ್ರಕರ್ತ ಸುಭಾಷ ಮಡ್ಲೂರ, ಡಾ.ಅಪ್ಪಗೆರೆ ಸೋಮಶೇಖರ ಸೇರಿದಂತೆ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

Share this article