ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕಾವ್ಯ ಸರ್ವಕಾಲಿಕ ಸತ್ಯವಾದ ಸಂಗತಿಯಾಗಿದ್ದು, ಮನಸ್ಸಿನ ಮುದಕ್ಕೆ ಕಾವ್ಯ ಮದ್ದಾಗಿದೆ ಎಂದು ಸಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಎಸ್. ಗಂಗಾಧರ ಅಭಿಪ್ರಾಯಪಟ್ಟರು. ನಗರದ ಕಾಲಭೈರವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಸಹಯೋಗದಲ್ಲಿ ಏರ್ಪಡಿಸಿದ್ದ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಶ್ರೇಷ್ಠತೆಯಲ್ಲಿ ಕಾವ್ಯ ಮುಖ್ಯ ಸ್ಥಾನ ಪಡೆದಿದೆ. ಕಾವ್ಯ ಕಟ್ಟುವುದು ಎಂದರೆ, ದೇಶವನ್ನೆ ಕಟ್ಟಿದಂತೆ. ಕಾವ್ಯ ಅಂತಹ ಅದ್ಭುತವಾದ ಶಕ್ತಿ ಹೊಂದಿದೆ. ಕಾವ್ಯ ಎಂಬುದು ನಿಜವಾದ ವಿರೋಧ ಪಕ್ಷದಂತೆ ಕೆಲಸ ಮಾಡುತ್ತದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಕಾವ್ಯದಿಂದ ಸಾಧ್ಯವಾಗಲಿದೆ ಎಂದರು. ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ, ಕವನಗಳು ಸಂಕ್ಷಿಪ್ತವಾಗಿ ವಿಚಾರಗಳನ್ನು ಮನಸ್ಸಿಗೆ ತಟ್ಟುವಲ್ಲಿ ಪರಿಣಾಮಕಾರಿ ಅಸ್ತ್ರವಾಗಿದೆ. ಹಳ್ಳಿಗಳ ಸೊಗಡನ್ನು ಇಂದಿಗೂ ಜಾನಪದದ ಮೂಲಕ ಹಿಡಿದಿಡುವ ಪ್ರಯತ್ನ ನಡೆಯುತ್ತಿರುವುದು ಆಶಾದಾಯಕ ಸಂಗತಿ. ಯುದ್ಧ ಜಗತ್ತನ್ನು ಘಾಸಿಗೊಳಿಸುತ್ತಿರುವ ಸಂದರ್ಭದಲ್ಲಿ ಕಾವ್ಯ ಮನಸ್ಸುಗಳನ್ನು ಕಟ್ಟುವಂತಾಗಲಿ ಎಂದು ಆಶಿಸಿದರು. ಶಿವಮೊಗ್ಗ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಉಪಾಧ್ಯಕ್ಷ ಡಿ.ಸಿ.ದೇವರಾಜ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಉಪಸ್ಥಿತರಿದ್ದರು. ಕವಿಗಳಾದ ಮಂಜುನಾಥ ಕಾಮತ್, ಮಧು, ನಾಗರಕೋಡಿಗೆ ಗಣೇಶಮೂರ್ತಿ, ಬಿ.ಟಿ.ಅಂಬಿಕಾ, ಉಮರ್ ಕೋಯಾ, ರಾಧಾ ಎಚ್.ಎಂ, ಡಾ. ಹಸಿನಾ, ನಳಿನಾ ಬಾಲಸುಬ್ರಹ್ಮಣ್ಯ, ರಂಜಿತಾ ಎಸ್.ವಿ., ಯೋಗೇಂದ್ರ, ಗೌರಿ, ಶೈಲಜಾ, ರವಿಕುಮಾರ್, ವಾಣಿ , ಸುಲೋಚನ ಕವನ ವಾಚನ ಮಾಡಿದರು. ಕೆ.ಎಸ್. ಮಂಜಪ್ಪ ಸ್ವಾಗತಿಸಿ, ಶಾಲಿನಿ ನಾಗರಕೋಡಿಗೆ ನಿರೂಪಿಸಿದರು. ಇದೇ ವೇಳೆ ದಸರಾ ಜನಪದ ಸಂಭ್ರಮದಲ್ಲಿ ವಿಜೇತರಾದ ಜನಪದ ಕಲಾ ತಂಡಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. - - - ಕೋಟ್ ಕನ್ನಡ ಸಾಹಿತ್ಯದಲ್ಲಿ ಪ್ರಕಾರಗಳು ಹೆಚ್ಚಿವೆ. ಗದ್ಯಗಳಿಗಿಂತ ಕವಿ ನಿರ್ಭಿತಿಯಿಂದ ತನ್ನ ಚಿಂತನೆಗಳನ್ನು ಕವನಗಳ ಮೂಲಕ ಹೇಳಬಹುದಾದ ಅವಕಾಶವಿದೆ. ವಾಚಿಸುವ ಕವನಗಳಿಗೂ ಓದಿಸಿಕೊಳ್ಳುವ ಕವನಗಳಿಗೆ ಬಹಳ ವ್ಯತ್ಯಾಸವಿದೆ. ಪ್ರಚಲಿತ ಸಮಸ್ಯೆಗಳ ಕುರಿತು ಯುವಸಮೂಹದಿಂದ ಮತ್ತಷ್ಟು ಕವನಗಳು ರಚನೆಯಾಗಲಿ - ಡಾ. ಕೆ.ಎಸ್. ಗಂಗಾಧರ, ಪ್ರಾಧ್ಯಾಪಕ - - - -22ಎಸ್ಎಂಜಿಕೆಪಿ06: ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಸಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಎಸ್. ಗಂಗಾಧರ ಉದ್ಘಾಟಿಸಿದರು.