ಕನ್ನಡಪ್ರಭ ವಾರ್ತೆ ಹಾಸನ
ನಗರದ ಕುವೆಂಪು ನಗರದಲ್ಲಿರುವ ವಕೀಲರಾದ ಗಿರಿಜಾಂಬಿಕಾ ಎಂ.ಬಿ. ಅವರ ‘ಸಾಕ್ಷಾತ್ಕಾರ’ ನಿವಾಸದಲ್ಲಿ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ ವತಿಯಿಂದ ಆಯೋಜಿಸಿದ್ದ ೩೪೨ನೇ ಮನೆಮನೆ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್ ಅವರ ‘ಒಳಗೊಂದು ತಣ್ಣನೆಯ ನದಿ’ ಕೃತಿಯನ್ನು ವಿಮರ್ಶಿಸಿ ಅವರು ಮಾತನಾಡಿ, ಸುಶೀಲಾ ಸೋಮಶೇಖರ್ ಅವರ ಕೃತಿಯಲ್ಲಿರುವ ಹನಿಗವನಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಈ ಕೃತಿಯಲ್ಲಿ ಒಟ್ಟು ೪೧೦ ಹನಿಗವನಗಳಿದ್ದು, ಪ್ರತಿಯೊಂದೂ ಆಳವಾದ ಅನುಭವ, ಜೀವನದರ್ಶನ ಹಾಗೂ ಚಿಂತನೆಯನ್ನು ಒಳಗೊಂಡಿವೆ ಎಂದರು. ಕೃತಿಯಲ್ಲಿನ ಕವನಗಳ ವೈಶಿಷ್ಟ್ಯವನ್ನು ವಿವರಿಸಿದ ಅವರು, ಅನೇಕ ಕನ್ನಡ ಕವಿಗಳ ಕೃತಿಗಳೊಂದಿಗೆ ಹೋಲಿಕೆ ಮಾಡಿ ವಿಶ್ಲೇಷಣೆ ನಡೆಸಿದರು. ಕಾವ್ಯವು ಕೇವಲ ಭಾವಪ್ರಕಟಣೆಯಲ್ಲ, ಅದು ಸಮಾಜವನ್ನು ತಿದ್ದಿ ಸರಿದಾರಿಗೆ ಕೊಂಡೊಯ್ಯುವ ಶಕ್ತಿಯುತ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಡಾ. ಸಿಂಧುಶ್ರೀ ಅನಿರುದ್ಧ ಅವರು ಕನಕದಾಸರ ಹರಿಭಕ್ತಿಸಾರ ಕಾವ್ಯವಾಚನದ ಮೂಲಕ ಕಾವ್ಯಾತ್ಮಕವಾಗಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನೆಮನೆ ಕವಿಗೋಷ್ಠಿ ಸಂಚಾಲಕಿ ಶ್ರೀಮತಿ ಸುಕನ್ಯ ಮುಕುಂದ ಅವರು ಮಾತನಾಡಿ, ಕವಿಗಳ ಮನದಾಳದ ಭಾವನೆಗಳು ಮೊಗ್ಗಿನಂತೆ ಮೌನವಾಗಿರುತ್ತವೆ. ಅವು ಕವನಗಳ ರೂಪದಲ್ಲಿ ಅರಳಿ ಸುಗಂಧ ಬೀರುವ ಹೂವಿನಂತೆ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುತ್ತವೆ ಎಂದು ಹೇಳಿದರು.ಕೃತಿಕಾರರಾದ ಸುಶೀಲಾ ಸೋಮಶೇಖರ್ ಅವರು ಮಾತನಾಡಿ, ತಮ್ಮ ಕೃತಿ ಪ್ರಕಟಣೆ ಮತ್ತು ಬಿಡುಗಡೆಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು. ಹಾಸನ ಜಿಲ್ಲೆಯಲ್ಲಿ ಮನೆಮನೆ ಕವಿಗೋಷ್ಠಿಯಂತಹ ಸಾಹಿತ್ಯ ಚಟುವಟಿಕೆಗಳು ಹೊಸ ಕವಿಗಳನ್ನು ಬೆಳೆಸುವಲ್ಲಿ ಮತ್ತು ಸಾಹಿತ್ಯ ರಚನೆಗೆ ಪ್ರೇರಣೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಜೆ.ಆರ್. ರವಿಕುಮಾರ್ ಜನಿವಾರ, ಮುಕುಂದ್ ಎಂ., ಪದ್ಮಾ ಎಚ್.ಕೆ., ಸುಮಾ ಎಚ್.ಸಿ., ಸಿ.ಎನ್. ತಿಮ್ಮೇಗೌಡ ಚೆನ್ನಂಗಿಹಳ್ಳಿ, ಗಿರಿಜಾ ನಿರ್ವಾಣಿ, ಸರೋಜಾ ಬಿ.ಎಂ., ಚೂಡಾಮಣಿ ಎಚ್.ಬಿ., ರತ್ನ ಬಿ.ಟಿ., ಎನ್.ಎಲ್. ಚನ್ನೇಗೌಡ, ಸವಿತಾ ಎನ್.ಎಚ್., ವತ್ಸಲ ಜಗದೀಶ್, ಸಮುದ್ರವಳ್ಳಿ ವಾಸು, ಕುಮಾರ ಚಲವಾದಿ, ರೇಖಾ ಪ್ರಕಾಶ್, ಭಾರತಿ ಎಚ್.ಎನ್., ಎಚ್.ಡಿ. ಶೈಲಜಾ, ಎಂ.ಜಿ. ಪರಮೇಶ ಮಡಬಲು, ಉಮೇಶ್ ಹೊಸಹಳ್ಳಿ, ಡಾ. ಶಾಂತ ಅತ್ನಿ, ಜಯಾ ರಮೇಶ್, ಮಂಜುಳಾ ಪ್ರಸಾದ್, ಹೇಮರಾಗ ಸೇರಿದಂತೆ ಹಲವರು ತಮ್ಮ ಕವನಗಳನ್ನು ವಾಚಿಸಿದರು. ಕವಿಗಳ ಕವನಗಳಿಗೆ ಸಭಿಕರಿಂದ ಹಾಗೂ ಸಾಹಿತ್ಯಾಸಕ್ತರಿಂದ ವಿಮರ್ಶಾತ್ಮಕ ಅಭಿಪ್ರಾಯಗಳು ವ್ಯಕ್ತವಾದವು.