ಮುಂಡರಗಿ: ಜನಪದರ ಮನೆ ಅಂಗಳದಲ್ಲಿ ಹಾಡುಗಳಾಗಿ ಕಾವ್ಯ ಹುಟ್ಟಿಕೊಂಡಿದ್ದು, ದುಡಿದು ದಣಿದು ಬಂದಾಗ ಜನಪದರು ತಮ್ಮದೇ ಶೈಲಿಯಲ್ಲಿ ಸೃಷ್ಟಿಸಿದ ಆಡುಭಾಷೆಯ ಕಾವ್ಯಗಳು ಜನ್ಮತಾಳಿ ಜನಮನದಲ್ಲಿ ನೆಲೆ ನಿಂತವು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸಪಾಟೀಲ ತಿಳಿಸಿದರು.ಸೋಮವಾರ ಸಂಜೆ ಪಟ್ಟಣದ ಕೆ.ಆರ್. ಬೆಲ್ಲದ ಕಾಲೇಜು ಸಭಾಭವನದಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ಜರುಗಿದ ಮಳೆ ಇಳೆ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಪ್ರಾ. ಡಾ. ಸಂತೋಷ ಹಿರೇಮಠ ಮಾತನಾಡಿ, ಅಪಾರ ಅನುಭವದ ಕಾವ್ಯಗಳ ಒಡೆಯ ಕವಿಯಾಗಿದ್ದು, ಇದು ಯಾವುದರಿಂದ ಕೊಂಡುಕೊಳ್ಳದ ವಸ್ತುವಾಗಿದ್ದು, ನೈಜ ಸ್ಥಿತಿಯಲ್ಲಿ ಪ್ರಕೃತಿದತ್ತವಾಗಿ ಬರುತ್ತದೆ. ಕವಿಗಳು ಪ್ರಯಾಸದ ಕವನ ರಚಿಸುವ ಬದಲು ಸಹಜತೆಯಲ್ಲಿ ರಚನೆ ಮಾಡಬೇಕು ಎಂದರು.ಕವಿಗೋಷ್ಠಿಯಲ್ಲಿ ಕವಿಗಳಾದ ಶಂಕರ ಕುಕನೂರ, ರವಿ ದೇವರೆಡ್ಡಿ, ಶೋಭಾ ಮೇಟಿ, ಕಳಕಪ್ಪ ಜಲ್ಲಿಗೇರಿ ಮಳೆಯ ಅವಾಂತರ ಮತ್ತು ಮಳೆಯಿಂದ ಇಳಗೆ ಕಳೆ ಮತ್ತು ಸಕಲ ಸಮೃದ್ಧಿ ಎಂಬ ಆಶಯ ವ್ಯಕ್ತಪಡಿಸಿದರೆ, ಬಾರದ ಮಳೆಗೆ ನಿರೀಕ್ಷೆ ಮತ್ತು ಮಳೆ ಸೊಬಗು ಮತ್ತು ಸೌಂದರ್ಯ ಕುರಿತು ಕೊಟ್ರೇಶ ಜವಳಿ, ಸಿ.ಕೆ. ಗಣಪ್ಪನವರ, ಎಂ.ಎಸ್. ಶೀರನಹಳ್ಳಿ, ಹೊನ್ನಕಿರಣ, ಗಿರಿಜಾ ಸೂಡಿ, ಸಂತೋಷ ಮುರಡಿ ವ್ಯಕ್ತಪಡಿಸಿದರು.ವೀಣಾ ಪಾಟೀಲ ಅವರ ಮಳೆ ಇಳೆ ಮತ್ತು ಮಹಿಳೆ ಒಂದನ್ನೊಂದು ಬಿಟ್ಟಿರಲಾರದ ಮತ್ತು ಮಹಿಳೆಯನ್ನು ಮಳೆಗೆ ಹೋಲಿಸಿ ಪ್ರಸ್ತುತಪಡಿಸಿದ ಕವನ ಗಮನ ಸೆಳೆಯಿತು. ಡಾ. ಸಂತೋಷ ಹಿರೇಮಠ, ಡಾ. ನಿಂಗು ಸೊಲಗಿ, ಆರ್.ಎಲ್. ಪೊಲೀಸಪಾಟೀಲ ಅವರ ಕವನಗಳು ಕವಿಗಳಿಗೆ ಸ್ಫೂರ್ತಿಯಾದವು.ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಭವನ ನಿರ್ಮಾಣದ ಕೆಲಸ ಭಾಗಶಃ ಪೂರ್ಣಗೊಂಡಿದ್ದು, ಮುಂದೆ ಸಾಹಿತ್ಯದ ಚಟುವಟಿಕೆಗಳು ಅಲ್ಲಿಯೇ ನಡೆಯುತ್ತವೆ. ಸಾಹಿತ್ಯ ಭವನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.
ಕೃಷ್ಣಮೂರ್ತಿ ಸಾಹುಕಾರ, ರಮೇಶಗೌಡ ಪಾಟೀಲ, ಪಾಲಾಕ್ಷಿ ಗಣದಿನ್ನಿ, ಐ.ಎಸ್. ಮುಲ್ಲಾ, ಸುರೇಶ ಭಾವಿಹಳ್ಳಿ ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು.