ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಗಣೇಶ ನಗರದ ಯಲ್ಲಾಲಿಂಗೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಗಾನಯೋಗಿ ಡಾ.ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮೊಬೈಲ್, ದೂರದರ್ಶನ (ಟಿವ್ಹಿ) ಯುಗದಲ್ಲಿ ನಾಟಕ ವೀಕ್ಷಣೆ ಕಡಿಮೆಯಾಗುತ್ತಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕಗಳು ಅಗತ್ಯವಿದೆ. ಪ್ರತಿ ಗ್ರಾಮದ ಜಾತ್ರೆಗಳಲ್ಲಿ ನಾಟಕ ಪ್ರದರ್ಶನವಾಗುವುದನ್ನು ಕಾಣುತ್ತೇವೆ. ನಮ್ಮ ದೇಶದ ಸಂಸ್ಕೃತಿ ಉಳಿಯಬೇಕಾದರೆ ಕಲಾವಿದರು, ಕವಿಗಳು, ಬರಹಗಾರರು ಉಳಿಯಬೇಕು. ಇವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯವಿದೆ. ಇವರದು ದೊಡ್ಡ ಶಕ್ತಿ. ಇವರ ಶಕ್ತಿ ಸಮಾಜ ಪರಿವರ್ತನೆ ಮಾಡಬಲ್ಲದು. ಮಹಾತ್ಮ ಗಾಂಧೀಜಿ ಬಾಲ್ಯದಲ್ಲಿ ಸತ್ಯಹರಿಶ್ಚಂದ್ರ ನಾಟಕ ವೀಕ್ಷಣೆಯಿಂದ ಬದಲಾವಣೆಯಾಗಿರುವುದನ್ನು ನಾವು ತಿಳಿದುಕೊಂಡಿದ್ದೇವೆ. ಇಂತಹ ಉದಾಹರಣೆಗಳು ಸಾಕಷ್ಟು ನಮ್ಮ ಕಣ್ಣಮುಂದಿವೆ ಎಂದು ಹೇಳಿದರು.
ಬರಹಗಾರರು, ಕವಿಗಳು, ಕಲಾವಿದರು ಎಂದಿಗೂ ಧೈರ್ಯಗೆಡಬಾರದು. ಅವರ ಹಿಂದೆ ಸರ್ಕಾರ ಸದಾ ಇರುತ್ತದೆ. ಈ ಸಂಘ ಕವಿ ಭವನ, ಸಂಘಕ್ಕೆ ಎರಡು ಎಕರೆ ಜಾಗ ಬೇಡಿಕೆ ನಮ್ಮ ಮುಂದೆ ಇಟ್ಟಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಗಮನಕ್ಕೆ ತಂದು ಸಿಎಂ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ಪ್ರಾಮಾಣಿಕವಾಗಿ ತರಲಾಗುವುದು ಎಂದು ಭರವಸೆ ನೀಡಿದರು.ಸಂಘದ ರಾಜ್ಯಾಧ್ಯಕ್ಷ ಶಂಕರಜಿ ಮಾತನಾಡಿ, ರಾಜ್ಯದಲ್ಲಿ ಎಲ್ಲದಕ್ಕೂ ಸಂಘಗಳಿವೆ. ಬರಹಗಾರರ, ಕವಿಗಳ ಸಂಘ ಇಲ್ಲದೇ ಇರುವುದರಿಂದಾಗಿ ನಾವು ಈ ಸಂಘ ಸ್ಥಾಪಿಸಿದ್ದೇವೆ. ಈ ಸಂಘದಿಂದ ಕವಿ-ಕಲಾವಿದರ ಬದುಕಿಗೆ ನೆರವಾಗುವ ಉದ್ದೇಶವಿದೆ. ರಾಜ್ಯದಲ್ಲಿ ವಿವಿಧ ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿದ್ದರೂ ಕವಿಗಳಿಗೆ, ಬರಹಗಾರರಿಗೆ, ಕಲಾವಿದರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಎಲ್ಲರನ್ನೂ ಒಂದುಗೂಡಿಸಿ ಇವರ ಜೀವನದ ಭದ್ರತೆಗೆ ಸಂಘವು ಶ್ರಮಿಸಲಿದೆ ಎಂದರು.
ಸಮಾರಂಭಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಗಾನಯೋಗಿ ಡಾ.ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ವಿವಿಧ ಕಲಾ ತಂಡದೊಂದಿಗೆ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ತಲುಪಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಂಕರಗೌಡ ಬಿರಾದಾರ, ಕಲ್ಲು ಸೊನ್ನದ, ಅಶೋಕ ಹಾರಿವಾಳ, ಪ್ರಕಾಶ ಬೆಣ್ಣೂರ, ಬಸವರಾಜ ನಂದಿಹಾಳ, ಸಂಗಮೇಶ ಕುಂಬಾರ, ನೀತಾ ಮೈಂದರ್ಗಿ, ದೇವೇಂದ್ರ ಗೋನಾಳ, ಮುತ್ತರಾಜ ಬಾಗೇವಾಡಿ, ಶಿವಾನಂದ ಬಡಿಗೇರ ಸೇರಿದಂತೆ ಅನೇಕರಿಗೆ ವಿವಿಧ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿಗಳ ನೆನಪು ಮನದಂಗಳದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು.