- ಮೂರು ಭಾಗ ಮಾಡಿದ್ದ ದುರುಳರು । ಒಬ್ಬ ವಶಕ್ಕೆ
---ಕನ್ನಡಪ್ರಭ ವಾರ್ತೆ ಚಾಮರಾಜನಗರಮಲೆಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿ ಸಮೀಪ ಹುಲಿಯ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಮಧ್ಯೆ, ಇದೊಂದು ಪ್ರತೀಕಾರದ ಕ್ರಮವಾಗಿದ್ದು, ಹುಲಿಯ ದಾಳಿ ಅಥವಾ ಅದರ ಉಪಟಳಕ್ಕೆ ಬೇಸತ್ತು ಹುಲಿಗೆ ವಿಷಪ್ರಾಶನ ಮಾಡಿಸಿ ಬಳಿಕ ಕೊಡಲಿಯಿಂದ ಹುಲಿಯನ್ನು ಮೂರು ಭಾಗಗಳಾಗಿ ಕೊಚ್ಚಿ ಕೊಲ್ಲಲಾಗಿದೆ. ಎರಡು ಭಾಗಗಳನ್ನು ಮಣ್ಣಿನಿಂದ, ಮತ್ತೊಂದು ಭಾಗವನ್ನು ಎಲೆಗಳಿಂದ ಮುಚ್ಚಲಾಗಿದೆ ಎಂಬ ಸಂಗತಿ ತನಿಖಾ ವರದಿಯಲ್ಲಿ ಪತ್ತೆಯಾಗಿದೆ.
ಎನ್‌ಟಿಸಿಎ ನಿಯಮಾನುಸಾರ ಬಂಡೀಪುರದ ಪಶುವೈದ್ಯ ಡಾ.ವಾಸಿಂ ಮಿರ್ಜಾ, ಹನೂರಿನ ಪಶು ವೈದ್ಯಾಧಿಕಾರಿ ಸಿದ್ದರಾಜು, ಎನ್‌ಜಿಒ ಸದಸ್ಯರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹುಲಿಯ ಅಂಗಾಂಗಗಳನ್ನು ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯದ ಪಚ್ಚೆದೊಡ್ಡಿ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ನಡೆಸುವಾಗ ಮಣ್ಣಿನಲ್ಲಿ ಹುದುಗಿಸಿದ್ದ ಹುಲಿಯ ಅರ್ಧ ಕಳೇಬರ ಪತ್ತೆಯಾಗಿತ್ತು. ಬಳಿಕ, ಸುತ್ತಮುತ್ತ ಹುಡುಕಾಡಿದಾಗ ಉಳಿದ ಭಾಗಗಳು ಪತ್ತೆಯಾಗಿದ್ದವು. ಹುಲಿಯ ಉಗುರು, ಹಲ್ಲು ಹಾಗೂ 4 ಕಾಲುಗಳು ಸುರಕ್ಷಿತವಾಗಿದ್ದವು. ಮೃತ ಹುಲಿಯು ಗಂಡಾಗಿದ್ದು, 12 ವರ್ಷದ ಪ್ರಾಯದ್ದಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.ಆರೋಪಿ ವಶಕ್ಕೆ:
ಈ ಮಧ್ಯೆ, ಘಟನೆಗೆ ಸಂಬಂಧಿಸಿ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು, ವಿಚಾರಣೆ ನಡೆಸಿದೆ. ಹುಲಿ ಹತ್ಯೆಯಲ್ಲಿ ಈತನೊಬ್ಬನೇ ಭಾಗಿಯಾಗಿದ್ದನೇ? ಅಥವಾ ಈತನಿಗೆ ಬೇರೆ ಯಾರದಾರೂ ಕೈ ಜೋಡಿಸಿದ್ದರೇ? ಭಾರೀ ಗಾತ್ರದ ಹುಲಿಯನ್ನು ಈತ ಕೊಂದಿದ್ದು ಹೇಗೆ? ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.ಇದೇ ವೇಳೆ, ಪಿಸಿಸಿಎಫ್ ಸ್ಮಿತಾ ನೇತೃತ್ವದ ತನಿಖಾ ತಂಡ ಶನಿವಾರ ಸ್ಥಳಕ್ಕೆ ಭೇಟಿ ಕೊಟ್ಟು, ಹುಲಿ ಕಳೇಬರ ದೊರೆತ ಸ್ಥಳಗಳ ಪರಿಶೀಲನೆ ನಡೆಸಿದೆ.
4 ತಿಂಗಳಲ್ಲಿ ಎಂಟು ಹುಲಿಗಳ ಸಾವು:2005ರ ಜೂನ್‌ನಲ್ಲಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯ ವ್ಯಾಪ್ತಿಯ ಮಹದೇಶ್ವರ ದೇವಸ್ಥಾನದ ಸಮೀಪ ಹುಲಿ ಬೇಟೆಯಾಡಿದ್ದ ಹಸುವಿಗೆ ಕ್ರಿಮಿನಾಶಕ ಹಾಕಲಾಗಿತ್ತು. ಅದನ್ನು ತಿಂದು, ಐದು ಹುಲಿಗಳು ಮೃತಪಟ್ಟಿದ್ದವು. ಇದಾದ ನಂತರ, ಆಗಸ್ಟ್ 12ರಂದು ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಎರಡು ಮರಿಗಳು ಮೃತಪಟ್ಟಿದ್ದವು. ಈಗ ಇನ್ನೊಂದು ಹುಲಿಯ ಕೊಲೆಯಾಗಿದೆ.