ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನ್ನಿಧ್ಯ ವೃದ್ಧಿಗಾಗಿ ಮಾ.1ರಿಂದ ಮಾ.7ರ ವರೆಗೆ ಶತಚಂಡಿಕಾಯಾಗ ಹಾಗೂ ಸೇವಾರೂಪದಲ್ಲಿ ದೊಡ್ಡರಂಗಪೂಜೆ ಉತ್ಸವ ಜರುಗಲಿದೆ. ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗರ್ಶನದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು, ತಯಾರಿ ಭರದಿಂದ ಸಾಗಿದೆ.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನ್ನಿಧ್ಯ ವೃದ್ಧಿಗಾಗಿ ಮಾ.1ರಿಂದ ಮಾ.7ರ ವರೆಗೆ ಶತಚಂಡಿಕಾಯಾಗ ಹಾಗೂ ಸೇವಾರೂಪದಲ್ಲಿ ದೊಡ್ಡರಂಗಪೂಜೆ ಉತ್ಸವ ಜರುಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತಿಳಿಸಿದರು.ಅವರು ಪೊಳಲಿ ಸರ್ವಮಂಗಲ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗರ್ಶನದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು, ತಯಾರಿ ಭರದಿಂದ ಸಾಗಿದೆ ಎಂದರು.ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಪ್ರವರ್ಗ ‘ಎ’ ಗೆ ಸೇರಿದ ದೇವಸ್ಥಾನವಾಗಿದೆ. ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತ ಪರಿಹಾರವಾಗಿ ಮಾ.5ರಂದು ಸಾವಿರ ಸೀಮೆಯವರು ಸೇರಿ ಶತಚಂಡಿಕಾಯಾಗ ಹಾಗೂ ಮಾ.6ರಂದು ಸೇವಾ ರೂಪದಲ್ಲಿ ದೊಡ್ಡರಂಗಪೂಜೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಮಾ.1ರಂದು ವಿವಿಧ ಧಾರ್ಮಿಕ ಕಾರ್ಯಗಳಯ ಆರಂಭಗೊಳ್ಳಲಿದೆ ಎಂದು ಹೇಳಿದರು.ಆರು ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶ ಉತ್ಸವ ಮಾದರಿಯ ವ್ಯವಸ್ಥೆಯ ಜೊತೆಗೆ ಶತಚಂಡಿಕಾಯಾಗ ಹಾಗೂ ದೊಡ್ಡ ರಂಗ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಸರ್ವರ ಸಹಕಾರವನ್ನು ಯಾಚಿಸುವುದಾಗಿ ತಿಳಿಸಿದರು.ಪ್ರತಿ ಮನೆಗೆ ಆಮಂತ್ರಣ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ. ಶತಚಂಡಿಕಾಯಾಗ ಹಾಗೂ ದೊಡ್ಡರಂಗ ಪೂಜೆಗೆ ಬರುವ ಭಕ್ತರ ಅನುಕೂಲಕ್ಕಾಗಿ 15 ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಶತಚಂಡಿಕಾಯಾಗಕ್ಕೆ ಸುಮಾರು 25 ಸಾವಿರ ಭಕ್ತರು ಬರುವ ನಿರೀಕ್ಷೆ ಇದ್ದು, ದೊಡ್ಡರಂಗಪೂಜೆಗೆ ಸುಮಾರು 25 ಸಾವಿರ ಜನ ಭಕ್ತರು ಬರುವ ನಿರೀಕ್ಷೆ ಇದೆ. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಚೆಂಡಿನ ಗದ್ದೆಯಲ್ಲಿ ಮಾಡಲಾಗುವುದು. ಶತಚಂಡಿಕಾಯಾಗಕ್ಕೆ ಬರುವ ಭಕ್ತರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ದೇವಳಕ್ಕೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಹೋಗಲು ವ್ಯವಸ್ಥಿತವಾಗಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಡಾ.ಅಮ್ಮುಂಜೆಗುತ್ತು ಮಂಜಯ್ಯ ಶೆಟ್ಟಿ, ಅರ್ಚಕರಾದ ಪದ್ಮನಾಭ ಭಟ್, ಅನಂತ ಪದ್ಮನಾಭ ಭಟ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.