ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣದ ಕೋಟೆ ಬ್ರಾಹ್ಮಣರ ಬೀದಿಯಲ್ಲಿ ವಾಸವಾಗಿರುವ ಅರ್ಪಿತಾ ಎಂಬ ಮಹಿಳೆ ಮೇಲೆ ಮನೆ ಖಾಲಿ ಮಾಡುವಂತೆ ಗಂಡನ ಕುಟುಂಬಸ್ಥರು ಶನಿವಾರ ಸಂಜೆ ಹಲ್ಲೆ ಮಾಡಿ ಸಾಮಾನುಗಳನ್ನು ಹೊರಹಾಕಿದ್ದಾರೆ. ಈ ವೇಳೆ 112ಕ್ಕೆ ಕರೆ ಮಾಡಿದ್ದಲ್ಲದೇ ಹತ್ತಿರದಲ್ಲಿಯೇ ಇರುವ ಪೊಲೀಸ್ ಠಾಣೆಗೆ ರಕ್ಷಣೆ ಕೋರಿ ದೂರು ನೀಡಲು ಹೋದ ಸಂದರ್ಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ತಡವಾಗಿ ಸ್ಥಳಕ್ಕೆ ಆಗಮಿಸಿದ ಎಎಸ್‌ಐ ದೇವರಾಜು, ಹಲ್ಲೆಗೆ ಒಳಗಾದ ಮಹಿಳೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ನ್ಯಾಯ ಕೊಡಿಸುವ ಬದಲು ದರ್ಪ ಮೆರೆದಿದ್ದಾರೆ.ಘಟನೆಯ ಹಿನ್ನೆಲೆ:
ಅರ್ಪಿತಾ ಅವರು ಐದು ವರ್ಷಗಳ ಹಿಂದೆ ಶಶಿಕುಮಾರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಪತಿ ಮತ್ತು ಮನೆಯವರು ಆಕೆಯನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಪತಿ ಮನೆಯಲ್ಲಿ ಇಲ್ಲದ ಸಮಯ ಸಾಧಿಸಿ ಅತ್ತೆ, ಅತ್ತಿಗೆ, ನಾದಿನಿ ಹಾಗೂ ಭಾವ ಎಲ್ಲರೂ ಸೇರಿ ಅರ್ಪಿತಾ ವಾಸವಿದ್ದ ಮಹಡಿಯ ಮನೆಗೆ ಬೀಗ ಹಾಕಿ, ಆಕೆಯನ್ನು ಮನೆಯಿಂದ ಹೊರಹಾಕಲು ಯತ್ನಿಸಿದ್ದಾರೆ.ಈ ವೇಳೆ ತನ್ನ ಮೇಲೆ ಹಲ್ಲೆ ನಡೆಯುತ್ತಿರುವಾಗ ರಕ್ಷಣೆ ಕೋರಿ ಅರ್ಪಿತಾ 112 ಸಹಾಯವಾಣಿಗೆ ಕರೆ ಮಾಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ವಾಹನ ಬಂದಿಲ್ಲ. ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದ ಎಎಸ್‌ಐ ದೇವರಾಜು, ಸಂತ್ರಸ್ತೆಗೆ ಸಾಂತ್ವನ ಹೇಳುವ ಬದಲು ಹಲ್ಲೆ ಮಾಡಿದವರ ಪರವಾಗಿ ನಿಂತಿದ್ದಾರೆ.
ಎಎಸ್‌ಐ ದೇವರಾಜು ಅವರು ಅರ್ಪಿತಾ ಅವರಿಗೆ ಅಸಭ್ಯ ಪದಗಳಿಂದ ನಿಂದಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಆಸ್ಪತ್ರೆಗೆ ದಾಖಲು:
ಗಂಡನ ಮನೆಯವರಿಂದ ಹಲ್ಲೆಗೆ ಒಳಗಾಗಿ ಸದ್ಯ ತೀವ್ರ ಎದೆನೋವು ಹಾಗೂ ಕೈಗೆ ಆದ ಗಾಯಗಳಿಂದ ಬಳಲುತ್ತಿರುವ ಅರ್ಪಿತಾ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರೀತಿಸಿ ಮದುವೆಯಾದ ಪತಿಯೇ ಈಗ ಮನೆಯಿಂದ ಹೊರಹಾಕಲು ಯತ್ನಿಸುತ್ತಿದ್ದಾನೆ. ರಕ್ಷಣೆ ನೀಡಬೇಕಾದ ಪೊಲೀಸರೇ ಹಲ್ಲೆಕೋರರ ಜೊತೆ ಸೇರಿ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ಕಣ್ಣೀರು ಹಾಕುತ್ತಾ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.ಈ ಕೂಡಲೇ ಉನ್ನತ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಂತಿಮವಾಗಿ ಹಲ್ಲೆಗೊಳಗಾದ ಅರ್ಪಿತಾ ಮತ್ತು ತಂದೆ- ತಾಯಿ ಮತ್ತು ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಿಸ್ತುಕ್ರಮದ ಭರವಸೆ: ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಎಎಸ್‌ಐ ದೇವರಾಜು ನೊಂದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಷಯವು ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು, ಈ ವಿಷಯದ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಶಿಸ್ತುಕ್ರಮ ಜರುಗಿಸಲಾಗುವುದು ಹಾಗೂ ಸಾರ್ವಜನಿಕರೊಂದಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಅನುಚಿತ ವರ್ತನೆಗೆ ಅಸ್ಪದ ನೀಡುವುದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಅವರು ಎಚ್ಚರಿಕೆ ನೀಡಿದ್ದಾರೆ.