13 ಪ್ರಕರಣಗಳ ಬೇಧಿಸಿದ ಪೊಲೀಸರು: 10 ಆರೋಪಿಗಳ ಬಂಧನ

KannadaprabhaNewsNetwork |  
Published : Jan 10, 2026, 01:15 AM IST
ಯಾದಗಿರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಪೃಥ್ವಿಕ್ ಶಂಕರ್‌, ಅಪರಾಧ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. | Kannada Prabha

ಸಾರಾಂಶ

ಜಿಲ್ಲೆಯ ವಿವಿಧೆಡೆ, ಕಳೆದ ಆರು ತಿಂಗಳುಗಳ ಅವಧಿಯಲ್ಲಿ ನಡೆದಿರುವ ವಿವಿಧ 13 ಪ್ರಕರಣಗಳನ್ನು ಬೇಧಿಸಿರುವ ಜಿಲ್ಲಾ ಪೊಲೀಸರ ತಂಡ, ನಗದು ಸೇರಿದಂತೆ ಸುಮಾರು ₹15 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿಪಡಿಸಿಕೊಂಡು, 10 ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ವಿವಿಧೆಡೆ, ಕಳೆದ ಆರು ತಿಂಗಳುಗಳ ಅವಧಿಯಲ್ಲಿ ನಡೆದಿರುವ ವಿವಿಧ 13 ಪ್ರಕರಣಗಳನ್ನು ಬೇಧಿಸಿರುವ ಜಿಲ್ಲಾ ಪೊಲೀಸರ ತಂಡ, ನಗದು ಸೇರಿದಂತೆ ಸುಮಾರು ₹15 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿಪಡಿಸಿಕೊಂಡು, 10 ಆರೋಪಿಗಳನ್ನು ಬಂಧಿಸಿದ್ದಾರೆ.

ಶುಕ್ರವಾರ ಸಂಜೆ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಚಿತ್ತಾಪುರ ತಾಲೂಕಿನ ಅಲ್ಲೂರ (ಬಿ) ಗ್ರಾಮದ ಬೈಕ್‌ಗಳ ಮಹಾದೇವ ದ್ಯಾವಣ್ಣನೋರ ಎಂಬ ಬೈಕ್‌ ಕಳ್ಳನನ್ನು ಬಂಧಿಸಿ, ಆತನಿಂದ 1.70 ಲಕ್ಷ ರು.ಗಳ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ನಾಲ್ಕು ಯಾದಗಿರಿ ನಗರ ಠಾಣೆ ಮತ್ತು ಇನ್ನೊಂದು ಬೆಂಗಳೂರಿನ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಬೈಕ್‌ಗಳು ಸೇರಿವೆ ಎಂದರು.

ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿ ಅಶೋಕ ಮುಷ್ಯರನ್ನು ಬಂಧಿಸಿ, ಆತನಿಂದ 1 49 ಲಕ್ಷ ರು. ಮೌಲ್ಯದ ವಿವಿಧ ಬಂಗಾರದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿಯಾಗಿ, ನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆಂಧ್ರಪ್ರದೇಶದ ಆನಂತಪುರದ ಮಹೇಶ ಮೊಗ ಆತನನ್ನು ಬಂಧಿಸಿ ನಗದು 4.80. ಲಕ್ಷ ರು., ಹಳ್ಳೆಪ್ಪ ಗೊಂದಲಗೇರಾ ಆತನಿಂದ 1.01.300 ರು. ಹಾಗೂ ಬಂಧಿತ ಪ್ರಶಾಂತ್ ಮತ್ತು ಶಿವಕುಮಾರ ಅವರಿಂದ 1.40 ಲಕ್ಷ ರು. ಮೌಲ್ಯದ 20 ಗ್ರಾಂ ಚಿನ್ನ, 80 ಸಾವಿರ ಮೌಲ್ಯದ 10 ಗ್ರಾಂ ಚಿನ್ನದ ಬೆಂಡೋಲಿ, 15 ಸಾವಿರ ರು. ಮೌಲ್ಯದ 20 ಸಾವಿರ ರು. ಮೌಲ್ಯದ 20 ಶೋಲೆ ಬೆಳ್ಳಿ ಸಾಮಾನು ವಶಪಡಿಸಿಕೊಳ್ಳಲಾಗಿದೆ ಎಂದು‌ ಎಸ್‌ಪಿ ಹೇಳಿದರು.

ರಾಯಚೂರಿನ ಆಂಜನೇಯ ಎಂಬ ಆರೋಪಿಯನ್ನು ಬಂಧಿಸಿ ಆತನಿಂದ 82 ಸಾವಿರ ರು. ಮೌಲ್ಯದ ಒಂದು ಬೈಕ್ ಮತ್ತು 10 ಗ್ರಾಂ ಬಂಗಾರ, ಶಿವಪ್ಪ ಬೇವಿನಹಳ್ಳಿ ಎಂಬ ಆರೋಪಿಯನ್ನು ಬಂಧಿಸಿ ಆತನಿಂದ 95 ಸಾವಿರ ರು. ಮೌಲ್ಯದ ಬೆಳ್ಳಿ ಸಾಮಾನುಗಳನ್ನು ಮತ್ತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1,10 ಲಕ್ಷ ರು. ಮೌಲ್ಯದ 11 ಕುರಿಗಳನ್ನು ಕಳ್ಳತನ ಮಾಡಿದ್ದ ದಶರಥ ಕಟ್ಟಿಮನಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಧರಣೇಶ, ಡಿಎಸ್ಪಿಗಳಾದ ಸುರೇಶ ನಾಯಕ್, ಜಾವೀದ್ ಇನಾಂದಾರ, ಸಿಪಿಐ ಸುನೀಲ್ ಮೂಲಿಮನಿ ಇದ್ದರು.

ಹಿರಿಯ ಪೊಲೀಸ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಸಿಪಿಐ ಸುನೀಲ್‌ ಮೂಲಿಮನಿ, ಪಿಎಸ್‌ಐಗಳಾದ ಮೆಹಬೂಬ್, ಮಂಜನಗೌಡ, ಹಣಮಂತ ಬಂಕಲಗಿ. ನಾಬರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮೋನಪ್ಪ, ವಿಷ್ಣುವರ್ಧನ, ಸೈದಪ್ಪ, ಸೈಯದ್‌ ಅಲಿ, ಸಾಬರೆಡ್ಡಿ, ಈರಪ್ಪ, ಅಬ್ದುಲ್ ಭಾಷಾ, ದಾವಲಸಾಬ್, ಗೋವಿಂದ, ವೆಂಕಟೇಶ, ಸಂಗನಗೌಡ. ಲಾಲಅಹ್ಮದ್, ವೆಂಕೋಬಾ, ಶರೀಫ್‌ನಾಬ್, ಹರಿನಾಥರೆಡ್ಡಿ, ರಾಘವೇಂದ್ರರೆಡ್ಡಿ, ರಮೇಶ ಮತ್ತು ಕರುಣೇಶ ಅವರುಗಳು ಜಾಲ ಬೀಸಿ ಈ ಎಲ್ಲ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಅದಕ್ಕಾಗಿ ಇವರಿಗೆಲ್ಲ ಇಲಾಖೆಯಿಂದ ಪ್ರಶಂಸನಾ ಪತ್ರ ನೀಡಿಲಾಗುವುದೆಂದು ಎಸ್‌ಪಿ ಪೃಥ್ವಿಕ್ ಶಂಕರ್ ಹೇಳಿದರು.

ಹೆಲ್ಮೆಟ್‌ ಧರಿಸಿ, ಪ್ರಾಣಾಪಾಯ ತಪ್ಪಿಸಿ: ಪೃಥ್ವಿಕ್‌ ಶಂಕರ್‌

ನಗರ ಸೇರಿದಂತೆ, ಜಿಲ್ಲೆಯ ಎಲ್ಲಡೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕುವ ಪ್ರಕ್ರಿಯೆ ಮುಂದುವರೆದಿದೆ ಎಂದು ತಿಳಿಸಿದ ಎಸ್ಪಿ ಪೃಥ್ವಿಕ್‌ ಶಂಕರ್, 2024ರಲ್ಲಿ ಜಿಲ್ಲೆಯಲ್ಲಿ 157 ಮತ್ತು 2025ರಲ್ಲಿ 166 ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ 85 ಬೈಕ್ ಸವಾರರು ಜೀವ ಕಳೆದುಕೊಂಡಿದ್ದಾರೆ. ಕಾರಣ ಕಡ್ಡಾಯವಾಗಿ ಹೆಲ್ಮಟ್ ಧರಿಸಿಬೇಕು. ಮೂವರು ಕುಳಿತುಕೊಂಡು ವಾಹನ ನಡೆಸಬಾರದು ಮತ್ತು ಮೊಬೈಲ್ ಬಳಕೆ ಮಾಡಬಾರದೆಂದು ಸಲಹೆ ನೀಡಿದ ಅವರು, ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದ್ದು, ಜನರು ಸಹ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ