ಜಿಲ್ಲಾ ಮಟ್ಟದ ಪ.ಜಾತಿ ಪಂಗಡದವರ ಕುಂದು ಕೊರತೆ ಸಭೆ
ಜಿಲ್ಲೆಯ ಪ.ಜಾತಿ ಮತ್ತು ಪಂಗಡದವರ ಕುಂದು ಕೊರತೆಗಳನ್ನು ಆಲಿಸಲು ಪೊಲೀಸ್ ಇಲಾಖೆಯಿಂದ ಪ್ರತೀ ತಿಂಗಳ 4ನೇ ಭಾನುವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿಯಮಿತವಾಗಿ ಜಿಲ್ಲಾ ಮಟ್ಟದ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ.ಜಾತಿ ಪಂಗಡದವರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿನ ವಿವಿಧ ಸಮಸ್ಯೆಗಳಿಂದ ನೊಂದಿರುವ ಪ.ಜಾತಿ ಮತ್ತು ಪಂಗಡದವರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗುತ್ತಿದ್ದು, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ತಮ್ಮ ಮನೆಗಳಿಗೆ ಪೊಲೀಸರು ಭೇಟಿ ನೀಡುವ ಸಂದರ್ಭದಲ್ಲಿ ಆಥವಾ 112 ಗೆ ಕರೆ ಮಾಡಿದಲ್ಲಿ ಅಥವಾ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದಲ್ಲಿ ತಕ್ಷಣ ಸ್ಪಂದಿಸಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಪ್ರತಿ ತಿಂಗಳು ಪ.ಜಾತಿ ಮತ್ತು ಪಂಗಡದವರ ಕುಂದು ಕೊರತೆ ಸಭೆ ನಡೆಸಿ ಸಮಸ್ಯೆ ಆಲಿಸಲಾಗುವುದು. ಪ.ಜಾತಿ ಪಂಗಡದ ನೊಂದ ಜನತೆಯ ಕರೆಗಳನ್ನು ತಪ್ಪದೇ ಸ್ವೀಕರಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಎಸ್ಪಿ ಅವರು, ಪೊಲೀಸ್ ಕಲ್ಯಾಣ ಮಂಟಪದಲ್ಲಿ ಪ.ಜಾತಿ ಮತ್ತು ಪಂಗಡದವರ ಕರಕುಶಲ ಮೇಳ, ವಸ್ತು ಪ್ರದರ್ಶನಕ್ಕೆ ಉಚಿತವಾಗಿ ಸ್ಥಳಾವಕಾಶ ನೀಡಲಾಗುವುದು ಎಂದರು.ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪ.ಜಾತಿ ಮತ್ತು ಪಂಗಡದ ಸಾರ್ವಜನಿಕರು, ಸಂಘಟನೆಗಳ ಮುಖಂಡರು ಮಾತನಾಡಿ, ಜಿಲ್ಲೆಯಲ್ಲಿ ಬೋಗಸ್ ಜಾತಿ ಪ್ರಮಾಣಪತ್ರಗಳು ಸಲ್ಲಿಕೆಯಾಗುತ್ತಿರುವುದನ್ನು ತಪ್ಪಿಸಿ, ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು, ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಲ್ಲಿಕೆಯಾಗುತ್ತಿರುವ ಪ.ಜಾತಿ ಮತ್ತು ಪಂಗಡದವರ ನಕಲಿ ಜಾತಿ ಪ್ರಮಾಣ ಪತ್ರಗಳ ಕುರಿತು ಸೂಕ್ತ ತನಿಖೆಯಾಗಬೇಕು, ದೌರ್ಜನ್ಯ ಪ್ರಕರಣಗಳಲ್ಲಿ ಕೇಸ್ ದಾಖಲಿಸಲು ಹೋದಾಗ ನಮ್ಮ ಮೇಲೆಯೇ ಕೌಂಟರ್ ಕೇಸ್ ಹಾಕುವುದನ್ನು ತಪ್ಪಿಸಬೇಕು, ದೌರ್ಜನ್ಯ ಪ್ರಕರಣಗಳಾದಾಗ ಪೊಲೀಸ್ ಇಲಾಖೆ ಮಾತ್ರವಲ್ಲದೇ ಇತರೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಅಗತ್ಯ ನೆರವು ಒದಗಿಸಬೇಕು, ಕಾರವಾರದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು, ಅಂಬೇಡ್ಕರ್ ಭವನ ನಿರ್ಮಾಣ ಕಾರವಾರ ನಗರ ಪ್ರದೇಶದಲ್ಲಿ ನಿರ್ಮಿಸಬೇಕು, ವಿವಿಧ ನಿಗಮಗಳಲ್ಲಿ ಸಾಲ ಪಡೆಯುವಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು, ಅತಿಕ್ರಮಣದಾರರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲು ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು, ವಿವಿಧ ಇಲಾಖೆಗಳಲ್ಲಿ ಪ.ಜಾತಿ ಮತ್ತು ಪಂಗಡದವರಿಗೆ ಲಭ್ಯವಿರುವ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಬೇಕು ಎಂದು ಕೋರಿದರು.
ಸಭೆಯಲ್ಲಿ ಎಎಸ್ಪಿಗಳಾದ ಕೃಷ್ಣಮೂರ್ತಿ, ಜಗದೀಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಮತ್ತು ಜಿಲ್ಲೆಯ ಪ.ಜಾತಿ ಪಂಗಡದ ವಿವಿಧ ಸಂಘಟನೆಗಳು ಮುಖಂಡರು, ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.ಸಭೆಗೂ ಮುನ್ನ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಸ್ವೀಕರಿಸಲಾಯಿತು.