
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಅಪರಾಧ ಪತ್ತೆ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದ, 275 ಪ್ರಕರಣಗಳ ಕಾರ್ಯಾ ಚರಣೆಯಲ್ಲಿ ಭಾಗಿಯಾಗಿದ್ದ ಇಲಾಖೆಯ ಹೆಮ್ಮೆಯ ಶ್ವಾನ ‘ದತ್ತ’ ಅನಾರೋಗ್ಯದಿಂದ ಮೃತಪಟ್ಟಿದೆ.2019ರ ಮೇ ತಿಂಗಳಲ್ಲಿ ಜನಿಸಿದ್ದ ದತ್ತ, ಅದೇ ವರ್ಷ ಅಪರಾಧ ಪತ್ತೆ ಶ್ವಾನವಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆ ಗೊಂಡಿತ್ತು. ಬೆಂಗಳೂರಿನಲ್ಲಿ ಕಠಿಣ ತರಬೇತಿ ಪಡೆದಿದ್ದ ದತ್ತ, ಹ್ಯಾಂಡ್ಲರ್‌ಗಳಾದ ರಾಜಪ್ಪ ಎಲ್.ಜಿ. ಹಾಗೂ ಮಂಜುನಾಥ್ ಎ.ಎಂ. ಅವರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸಿತ್ತು.ಕಳ್ಳತನ, ದರೋಡೆ, ಕೊಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿ 61 ಪ್ರಕರಣಗಳಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು. ಅಲ್ಲದೆ, 9 ಪ್ರಕರಣಗಳಲ್ಲಿ ಆರೋಪಿಗಳನ್ನು ನಿಖರವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿತ್ತು.2025ರಲ್ಲಿ ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ 70 ವರ್ಷದ ವೃದ್ಧರೊಬ್ಬರನ್ನು ಸತತ 3 ದಿನಗಳ ಕಾರ್ಯಾಚರಣೆ ಬಳಿಕ ದಟ್ಟ ಅರಣ್ಯದಲ್ಲಿ ಜೀವಂತವಾಗಿ ಪತ್ತೆಹಚ್ಚುವ ಮೂಲಕ ವಿಶೇಷ ಸಾಧನೆ ಮಾಡಿತ್ತು.ಪೊಲೀಸ್ ಇಲಾಖೆ ವಾರ್ಷಿಕ ಡ್ಯೂಟಿ ಮೀಟ್‌ನಲ್ಲಿ ಸತತ 2 ಬಾರಿ ವಲಯ ಮಟ್ಟದ ಬೆಳ್ಳಿ ಪದಕ ಗಳಿಸಿದ್ದ ದತ್ತ, ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ಜಿಲ್ಲೆಯನ್ನು ಪ್ರತಿನಿಧಿಸಿತ್ತು. ಚಿಕ್ಕಮಗಳೂರು ಹಬ್ಬ, ಎನ್‌ಸಿಸಿ ಶಿಬಿರ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಗಮನ ಸೆಳೆದಿತ್ತು.ದತ್ತನ ನಿಧನಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಬನಿ ಮಿಡಿದಿದ್ದು, ಪೊಲೀಸ್ ಇಲಾಖೆಯಿಂದ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.