
ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ
ಧರ್ಮ ಮತ್ತು ವಾಣಿಜ್ಯ ಬದುಕಿನ ಪೂರಕ ಶಕ್ತಿಗಳು ಇವೆರಡರ ಸಮನ್ವಯದಿಂದ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಶ್ರೀ ವೀರಭದ್ರೇಶ್ವರ ಪ್ರಸನ್ನ ಕಂಫರ್ಟ್ಸ್ ಉದ್ಘಾಟನೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಧರ್ಮ ಮನುಷ್ಯನ ಬದುಕಿಗೆ ಮೌಲ್ಯ ನೀಡಿದರೆ, ವಾಣಿಜ್ಯ ಬದುಕಿಗೆ ಅಗತ್ಯವಾದ ಆರ್ಥಿಕ ಶಕ್ತಿ ಒದಗಿಸುತ್ತದೆ. ಧರ್ಮ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದರೆ, ವಾಣಿಜ್ಯ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಧರ್ಮವಿಲ್ಲದ ಸಂಪತ್ತು ಅಹಂಕಾರಕ್ಕೆ ಕಾರಣವಾಗಬಹುದು. ಧರ್ಮದ ಹಾದಿಯಲ್ಲಿ ಗಳಿಸಿದ ಸಂಪತ್ತು ಸಮಾಜದ ಕಲ್ಯಾಣಕ್ಕೆ ಬಳಕೆಯಾಗುತ್ತದೆ. ಸಂಪಾದನೆಯಲ್ಲಿ ಪ್ರಾಮಾಣಿಕತೆ, ವ್ಯವಹಾರದಲ್ಲಿ ನೈತಿಕತೆ ಹಾಗೂ ಸಂಪತ್ತಿನ ಬಳಕೆಯಲ್ಲಿ ದಾಸೋಹದ ಮನೋಭಾವ ಇರಬೇಕು. ಲಾಭ ಗಳಿಸುವುದು ತಪ್ಪಲ್ಲ. ಆದರೆ ಅನ್ಯಾಯದ ಮೂಲಕ ಲಾಭ ಗಳಿಸುವುದು ಧರ್ಮಸಮ್ಮತವಲ್ಲ. ಸಂಪತ್ತು ಗಳಿಸುವ ಜೊತೆಗೆ ಸಮಾಜದ ವಿಶ್ವಾಸ ಗಳಿಸುವುದೇ ನಿಜವಾದ ಯಶಸ್ಸು ಎಂದರು.ಶ್ರೀ ರೇಣುಕಾಚಾರ್ಯರ 51 ಅಡಿ ಎತ್ತರದ ಭವ್ಯ ಮಂಗಳಮೂರ್ತಿ ವಿಗ್ರಹದ ಲೋಕಾರ್ಪಣೆ ಮುಂದಿನ ಮಾರ್ಚ್ ತಿಂಗಳಲ್ಲಿ ನೆರವೇರಿಸಲಾಗುವುದು. ಈ ಮಹತ್ಕಾರ್ಯದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಹಕಾರ ಸ್ಮರಣೀಯ. ಮೈಸೂರು ಮಹಾರಾಜರು ನಿರ್ಮಿಸಿಕೊಟ್ಟಿದ್ದ ಶ್ರೀಮಠದ ಪುನರ್‌ನಿರ್ಮಾಣ ಕಾರ್ಯಕ್ಕೆ ಸಂಕಲ್ಪಿಸಲಾಗಿದ್ದು, ಸುಮಾರು ₹20 ಕೋಟಿ ವೆಚ್ಚವಾಗಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ₹5ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಭಾರತೀಯ ಪರಂಪರೆಯಲ್ಲಿ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರಲಿಲ್ಲ. ಶಿಕ್ಷಣ, ಕಲೆ, ಸಂಸ್ಕೃತಿ, ಅನ್ನದಾಸೋಹ ಹಾಗೂ ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದವು. ಧರ್ಮಮಾರ್ಗದಲ್ಲಿ ಗಳಿಸಿದ ಸಂಪತ್ತನ್ನು ಸದ್ವಿನಿಯೋಗ ಮಾಡಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬೀರೂರು ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವಾಣಿಜ್ಯ ಸಂಕೀರ್ಣಗಳು ನೂರಾರು ಕುಟುಂಬಗಳ ಬದುಕಿಗೆ ಆಸರೆಯಾಗುತ್ತವೆ. ಪರಸ್ಪರ ವಿಶ್ವಾಸದೊಂದಿಗೆ ವ್ಯವಹಾರ ವೃದ್ಧಿಸಲಿ ಎಂದು ಆಶಿಸಿದರು.ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆ.ಬಿದರೆಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮ ಗಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿಯ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಸಂಕೀರ್ಣದ ಮಾಲೀಕ ಎಚ್.ಎಂ. ಲೋಕೇಶ್ ಉಪಸ್ಥಿತರಿದ್ದರು.