ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರ ಸಭೆ ನಡೆಸಿ: ಮಧು ಬಂಗಾರಪ್ಪ

KannadaprabhaNewsNetwork |  
Published : Nov 08, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರ ಸಭೆ ನಡೆಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿರಂತರವಾಗಿ ಸಭೆಗಳನ್ನು ಆಯೋಜಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಚಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರ ಸಭೆ ನಡೆಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿರಂತರವಾಗಿ ಸಭೆಗಳನ್ನು ಆಯೋಜಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಚಿಸಿದರು.

ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬ ಭಾವನೆ ಬಹುತೇಕ ಪೋಷಕರಲ್ಲಿದೆ. ಆದರೆ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಶ್ರಮದ ಜತೆಗೆ ಪೋಷಕರ ಪ್ರಯತ್ನವೂ ಅಗತ್ಯ. ಈ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಪೋಷಕರ ಸಭೆ ನಡೆಸಬೇಕು ಎಂದು ತಿಳಿಸಿದರು.

ಶಾಲೆಗಳಲ್ಲಿ ಶಿಕ್ಷಕರು ಸ್ವಯಂ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಇದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ರಾಜ್ಯದ ಸುಮಾರು 15 ಜಿಲ್ಲೆಗಳಲ್ಲಿ ಈಗಾಗಲೇ ದ್ವಿಭಾಷಾ ಮಾಧ್ಯಮದ ಬೋಧನೆ ಆರಂಭಿಸಲಾಗಿದೆ. ಉಳಿದ ಜಿಲ್ಲೆ ಗಳಲ್ಲೂ ಕೆಲವು ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ಇನ್ನು ಕೆಲವು ಶಾಲೆಗಳಿಗೆ ಅನುಮತಿ ದೊರೆತಿಲ್ಲ. ಇದರಿಂದ ಸಮಸ್ಯೆಗಳು ಉಂಟಾಗುತ್ತಿವೆ. ದ್ವಿಭಾಷಾ ಬೋಧನೆ ಇರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ ವಾಗಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ದ್ವಿಭಾಷಾ ಮಾಧ್ಯಮದ ಬೋಧನೆ ಆರಂಭಿಸಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ದ್ವಿಭಾಷಾ ಬೋಧನೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇಂಗ್ಲಿಷ್ ಮಾಧ್ಯಮ ಇಲ್ಲದಿದ್ದರೆ ಮಕ್ಕಳು ಹೇಗೆ ಬರುತ್ತಾರೆ?

ಇದಕ್ಕೂ ಮೊದಲು ಮಾತನಾಡಿದ ವಿಪ ಸದಸ್ಯ ಎಸ್.ಎಲ್. ಭೋಜೇಗೌಡ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವಂತೆ ಸರ್ಕಾರ ಮತ್ತು ಶಿಕ್ಷಣ ಸಚಿವರು ಹೇಳುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಶಿಕ್ಷಕರು, ಮೂಲ ಸೌಕರ್ಯ ಹಾಗೂ ಇಂಗ್ಲಿಷ್ ಮಾಧ್ಯಮದ ಬೋಧನೆ ಇಲ್ಲದಿದ್ದರೆ ಮಕ್ಕಳು ಹೇಗೆ ಬರುತ್ತಾರೆ ಎಂದು ಪ್ರಶ್ನಿಸಿದರು.

ಒಂದು ಶಾಲೆಗೆ ದ್ವಿಭಾಷಾ ಮಾಧ್ಯಮ ಬೋಧನೆಗೆ ಅನುಮತಿ ನೀಡಲಾಗಿದೆ. ಮತ್ತೊಂದು ಶಾಲೆಗೆ ಅನುಮತಿ ನೀಡಿಲ್ಲ. ಇಂತಹ ತಾರತಮ್ಯದಿಂದ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಎಲ್‌ಕೆಜಿ, ಯುಕೆಜಿ ಆರಂಭದಿಂದ ದಾಖಲಾತಿಗೆ ಉತ್ತೇಜನದ್ವಿಭಾಷಾ ಮಾಧ್ಯಮ ಬೋಧನೆ ಆರಂಭಿಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. ಸಮಸ್ಯೆ ಗುರುತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಇಲ್ಲಿ ಕಲಿಯುವ ಮಕ್ಕಳು ಮುಂದೆ ಅದೇ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದು ಶಿಕ್ಷಣ ಮುಂದುವರಿಸಲಿದ್ದಾರೆ.

ಪ್ರಾಥಮಿಕ ಶಾಲೆಗಳಿರುವ ಕಡೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 183 ಪ್ರೌಢಶಾಲೆಗಳನ್ನು ಮಂಜೂರು ಮಾಡಲಾಗಿದೆ. ಪ್ರೌಢಶಾಲೆಗಳಿರುವ ಕಡೆ 75 ಪಿಯು ಕಾಲೇಜುಗಳನ್ನು ಉನ್ನತೀಕರಿಸಲಾಗಿದೆ.65 ಹೊಸ ಪಿಯು ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ.

ಶಿಕ್ಷಕರ ನೇಮಕಾತಿ ವಿಳಂಬವೂ ಸರ್ಕಾರಿ ಶಾಲೆಗಳ ಸಮಸ್ಯೆಗಳಿಗೆ ಒಂದು ಕಾರಣವಾಗಿದೆ. 2024ರಿಂದ ಪೂರ್ಣ ಪ್ರಮಾಣದಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. 18 ಸಾವಿರ ಹೊಸ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಡಯಟ್ ಮೂಲಕ ಶಿಕ್ಷಕರಿಗೆ ತರಬೇತಿ ನೀಡಿ, ಈಗಾಗಲೇ 15-20 ಜಿಲ್ಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಬೋಧನೆ ಆರಂಭಿಸ ಲಾಗಿದೆ ಎಂದು ಸಚಿವರು ವಿವರಿಸಿದರು.

ಅನುದಾನಿತ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಆಗ್ರಹ

ರಾಜ್ಯದ ಅನುದಾನಿತ ಶಾಲೆಗಳಲ್ಲಿ ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿಲ್ಲ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸರ್ಕಾರವೇ ಅತಿಥಿ ಶಿಕ್ಷಕರನ್ನು ಒದಗಿಸಬೇಕು ಎಂದು ಎಸ್.ಎಲ್. ಭೋಜೇಗೌಡ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಈ ವಿಷಯ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿ ಗಟ್ಟಿಯಾಗಿ ಪ್ರಸ್ತಾಪಿಸಬೇಕು. ಇದರಿಂದ ಸಮಸ್ಯೆ ಪರಿಹಾರಕ್ಕೆ ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ಶಾಸಕರಾದ ಎಚ್‌.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಶ್ರೀನಿವಾಸ್‌, ಎಸ್‌.ಎಲ್‌.ಭೋಜೇಗೌಡ, ಗಾಯತ್ರಿ ಶಾಂತೇಗೌಡ, ಕೆಪೆಕ್‌ ಅಧ್ಯಕ್ಷ ಬಿ.ಎಚ್‌.ಹರೀಶ್‌, ಕಾಡಾ ಅಧ್ಯಕ್ಷ ಡಾ.ಅಂಶುಮಂತ್‌, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ಜಿಪಂ ಸಿಇಒ ಮೀನಾಕ್ಷಿ ಆರ್ಯ, ಡಿಡಿಪಿಐ ತಿಮ್ಮರಾಜು ಮೊದಲಾದವರಿದ್ದರು.

-- ಬಾಕ್ಸ್‌---

₹2,200 ಕೋಟಿ ವೆಚ್ಚದಲ್ಲಿ 500 ಶಾಲೆಗಳ ಅಭಿವೃದ್ಧಿರಾಜ್ಯದ 500 ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ವಿವಿಧ ಇಲಾಖೆಗಳ ಸರ್ಕಾರಿ ಅನುದಾನ ಬಳಸಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಡಿಸೆಂಬರ್‌ನಲ್ಲಿ ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಲಾಗಿದ್ದು, ಈಗಾಗಲೇ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ.

ಇದರ ಜತೆಗೆ ಕಾರ್ಪೊರೇಟ್ ಕಂಪನಿಗಳ ಸಿಎಸ್‌ಆರ್ ಅನುದಾನ ಬಳಸಿ ಸುಮಾರು 1,000 ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕಂಪನಿಗಳಿಂದ ಸರ್ಕಾರ ನೇರವಾಗಿ ಹಣ ಪಡೆಯುವುದಿಲ್ಲ. ಬದಲಾಗಿ ಕಂಪನಿ ಗಳೇ ನೇರವಾಗಿ ಹಣ ವಿನಿಯೋಗಿಸಿ, ಸರ್ಕಾರದ ಸೂಚನೆಯಂತೆ ಕಾಮಗಾರಿ ಕೈಗೊಳ್ಳಲಿವೆ ಎಂದು ಸಚಿವರು ತಿಳಿಸಿದರು.

-- ಬಾಕ್ಸ್‌--

ಡಿಸೆಂಬರ್‌ಗೆ 2027ರ ದಾಖಲಾತಿ ಗುರಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಡಿಸೆಂಬರ್‌ನಲ್ಲಿ 2027ರ ಶೈಕ್ಷಣಿಕ ವರ್ಷದ ದಾಖಲಾತಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಗುರಿ ನಿಗದಿಪಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

--- ಬಾಕ್ಸ್‌: --

ಹಾಜರಾತಿ ಸಮಸ್ಯೆಗೆ 2 ತಿಂಗಳಲ್ಲಿ ಪರಿಹಾರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಲು ಹೆಚ್ಚು ಸಮಯ ವ್ಯರ್ಥವಾಗುತ್ತಿದೆ. ಇಂಟರ್‌ನೆಟ್ ಸಮಸ್ಯೆಯಿಂದ ಕೆಲವು ವಿದ್ಯಾರ್ಥಿಗಳ ಹಾಜರಾತಿ ದಾಖಲಾದರೆ ಇನ್ನು ಕೆಲವರ ಹಾಜರಾತಿ ದಾಖಲಾಗುತ್ತಿಲ್ಲ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಂದಿನ 2 ತಿಂಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

--- ಬಾಕ್ಸ್‌:--

ಆತಂಕ ಬೇಡ: ದ್ವಿಭಾಷಾ ಬೋಧನೆಗೆ ಅನುಮತಿಕೆಲವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆಗೆ ಅಧಿಕೃತ ಅನುಮತಿ ಇಲ್ಲದಿದ್ದರೂ ದ್ವಿಭಾಷಾ ಮಾಧ್ಯಮದ ಬೋಧನೆ ನಡೆಸಲಾಗುತ್ತಿದೆ. ಅಂತಹ ಶಾಲೆಗಳ ಶಿಕ್ಷಕರು ಆತಂಕಪಡುವ ಅಗತ್ಯವಿಲ್ಲ. ಅನುಮತಿ ಇಲ್ಲದೆ ಬೋಧನೆ ನಡೆಸುತ್ತಿರುವ ಶಾಲೆಗಳ ಬಗ್ಗೆ ಮಾಹಿತಿ ನೀಡಿದರೆ ಕೂಡಲೇ ಅನುಮತಿ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

-- ಬಾಕ್ಸ್‌---

ಭೋಜೇಗೌಡಗೆ ಚೀಟಿ ಕೊಟ್ಟು ಹೊರಡಿ ಎಂದು ಮಧು ಬಂಗಾರಪ್ಪ !

ಶಿಕ್ಷಕರು, ವಿದ್ಯಾರ್ಥಿಗಳ ಕುರಿತು ಹಲವು ವಿಚಾರದ ಬಗ್ಗೆ ಸಭೆಯಲ್ಲಿ ವಿಧಾನಪರಿಷತ್ತು ಸದಸ್ಯ ಎಸ್‌.ಎಲ್‌.ಭೋಜೇಗೌಡ ಪ್ರಶ್ನಿಸುತ್ತಿದ್ದರು. ಆ ಮಾಹಿತಿಯನ್ನು ಶಿಕ್ಷಣ ಇಲಾಖೆಯಿಂದ ಪಡೆದುಕೊಂಡ ಸಚಿವ ಮಧು ಬಂಗಾರಪ್ಪ, ಮಾಹಿತಿ ಚೀಟಿ ಯನ್ನು ಭೋಜೇಗೌಡರ ಕೈಕೊಟ್ಟು, ಈ ಚೀಟಿ ತೆಗೆದುಕೊಂಡು ಜೇಬಿನಲ್ಲಿ ಇಟ್ಟುಕೊಂಡು ಹೋಗಬೇಕು. ಇನ್ನು ಯಾವುದೇ ಪ್ರಶ್ನೆ ಮಾಡಬಾರದು ಎಂದು ತಮಾಷೆಯಾಗಿ ಮಧು ಬಂಗಾರಪ್ಪ ಹೇಳಿದ ಪ್ರಸಂಗ ನಡೆಯಿತು.

ಹಲವು ಸಮಸ್ಯೆಗಳನ್ನು ಭೋಜೇಗೌಡ ಪ್ರಸ್ತಾಪಿಸುತ್ತಿರುವ ಈ ವಿಷಯಗಳನ್ನು ಫೋನ್‌ ಮಾಡಿ ಅಥವಾ ಮೆಸೇಜ್‌ ಮೂಲಕ ತಮ್ಮ ಗಮನಕ್ಕೆ ತರಬೇಕಾಗಿತ್ತು ಎಂದು ಮಧು ಬಂಗಾರಪ್ಪ ಕೇಳಿ ಕೊಂಡ ಘಟನೆಯೂ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ