ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ಆಧಾರ್ ಸೇವಾ ಕೇಂದ್ರವನ್ನು ಯಾದಗಿರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ್ ಉದ್ಘಾಟಿಸಿದರು. ಈ ಸಂದರ್ಭ ಯುಐಡಿಎಐ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಸಹಾಯಕ ವಿಭಾಗಾಧಿಕಾರಿ ಮಾಧವಿ ಲತಾ, ಸಹಾಯಕ ವ್ಯವಸ್ಥಾಪಕ ಮೊಹಮ್ಮದ್ ಮುಸಾಬ್, ಯಾದಗಿರಿ ಕೇಂದ್ರದ ವ್ಯವಸ್ಥಾಪಕ ಮಲ್ಲಿಕಾರ್ಜುನ ಹೊಡಲೆ, ಎಎಸ್ಕೆ ಕಾರ್ಯಾಚರಣೆ ವ್ಯವಸ್ಥಾಪಕ ಮಂಜುನಾಥ್ ಹಾಗೂ ಕೇಂದ್ರದ ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ನಿವಾಸಿಗಳಿಗೆ ಸುಲಭವಾಗಿ ಆಧಾರ್ ಸೇವೆಗಳನ್ನು ಒದಗಿಸುವಲ್ಲಿ ಯುಐಡಿಎಐ ಕೈಗೊಂಡಿರುವ ಪ್ರಯತ್ನಗಳನ್ನು ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ್ ಶ್ಲಾಘಿಸಿದರು. ಆಧಾರ್ ಆಪರೇಟರ್‌ಗಳು ನಿವಾಸಿಗಳ ಕುಂದುಕೊರತೆಗಳನ್ನು ತಾಳ್ಮೆ ಮತ್ತು ಸಮರ್ಪಣಾ ಮನೋಭಾವದಿಂದ ಪರಿಹರಿಸುವಂತೆ ಸಲಹೆ ನೀಡಿದರು. ಕೇಂದ್ರದ ಸಿಬ್ಬಂದಿಯ ಕಾರ್ಯವನ್ನು ಪ್ರಶಂಸಿಸಿದರು.ಆಧಾರ್ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದು, ಕೇಂದ್ರದಲ್ಲಿ ಒದಗಿಸಲಾಗುತ್ತಿರುವ ವಿವಿಧ ಆಧಾರ್ ಸೇವೆಗಳನ್ನು ಪರಿಶೀಲಿಸಿದರು. ಯಾದಗಿರಿ ಆಧಾರ್ ಸೇವಾ ಕೇಂದ್ರವು ನಿವಾಸಿಗಳಿಗೆ ನಿರಂತರ ಹಾಗೂ ಸುಗಮ ಆಧಾರ್ ಸೇವೆಗಳನ್ನು ಒದಗಿಸಲು ನಾಲ್ಕು ಕಾರ್ಯನಿರ್ವಹಣೆಯಲ್ಲಿರುವ ಆಧಾರ್ ಕಿಟ್‌ಗಳನ್ನು ಹೊಂದಿದೆ.
ನೋಂದಣಿ ಮತ್ತು ನವೀಕರಣ ಸೇವೆಗಳ ಜೊತೆಗೆ, ಆಧಾರ್ ಸಂಖ್ಯೆಯನ್ನೊಳಗೊಂಡಿರುವ ನಿವಾಸಿಗಳು ಸಲ್ಲಿಸುವ ಕುಂದುಕೊರತೆಗಳನ್ನು ಸ್ವೀಕರಿಸಿ, ಯುಐಡಿಎಐ ಪ್ರಾದೇಶಿಕ ಕಚೇರಿ, ಬೆಂಗಳೂರು ಮೂಲಕ ಅವುಗಳ ಪರಿಹಾರಕ್ಕೆ ಈ ಕೇಂದ್ರವು ನೆರವಾಗಲಿದೆ.
ಯುಐಡಿಎಐ ನಿರ್ವಹಣೆಯ ಆಧಾರ್ ಸೇವಾ ಕೇಂದ್ರಗಳನ್ನು ಎಲ್ಲ ವರ್ಗದ ನಿವಾಸಿಗಳಿಗೆ ಅನುಕೂಲವಾಗುವಂತೆ ಹಾಗೂ ನಿವಾಸಿ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ಈ ಕೇಂದ್ರಗಳಲ್ಲಿ ವ್ಹೀಲ್ ಚೇರ್ ಸೌಲಭ್ಯ, ವಿಶೇಷ ಅಗತ್ಯವಿರುವವರಿಗೆ ಅನುಕೂಲಕರ ಶೌಚಾಲಯಗಳು ಮತ್ತು ಪ್ರತ್ಯೇಕ ಕುಂದುಕೊರತೆ ಪರಿಹಾರ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಿವಾಸಿಗಳು ಆಧಾರ್ ಸೇವೆಗಳಿಗಾಗಿ ಯುಐಡಿಎಐ ಆನ್‌ಲೈನ್ ಅಪಾಯಿಂಟ್‌ಮೆಂಟ್ ಪೋರ್ಟಲ್ ಮೂಲಕ ಮುಂಗಡ ಸಮಯವನ್ನು ಕಾಯ್ದಿರಿಸಬಹುದು. ಆನ್‌ಲೈನ್ ಅಪಾಯಿಂಟ್‌ಮೆಂಟ್ ಪೋರ್ಟಲ್: https://bookappointment.uidai.gov.in/ UIDAIಯ ಮೇಲ್ವಿಚಾರಣೆಯಲ್ಲಿ ಮೆ. ಬಿಎಲ್‌ಎಸ್ ಇಂಟರ್ನ್ಯಾಶನಲ್ ಲಿ., ಸಂಸ್ಥೆಯು ಈ ಆಧಾರ್ ಸೇವಾ ಕೇಂದ್ರದ ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸಲಿದೆ.