ರಾಮನಗರ: ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಜನರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳ ಮೂಲಕ ರಾಮನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ರಾಮನಗರ ನಗರಸಭೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಹಲವು ಪ್ರಥಮಗಳಿಗೂ ಸಾಕ್ಷಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ಈ ಅವಧಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಪಕ್ಷಪಾತ, ರಾಜಕೀಯ ವೈಷಮ್ಯ, ವೈಯಕ್ತಿಕ ದ್ವೇಷ, ಸ್ವಾರ್ಥ, ಅಸೂಯೆ ಎಲ್ಲವನ್ನು ಮರೆತು ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡಿದ್ದೇವೆ. ನಾನು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಲು ವಿಪಕ್ಷದವರು ಸಹಕಾರ ನೀಡಿದರು. ನಮ್ಮ ಅವಧಿಯ ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ಯುಐಡಿಎಫ್ ಅನುದಾನದಲ್ಲಿ ಮಂಜೂರಾಗಿದ್ದ 82 ಕೋಟಿ , ಅಲ್ಪ ಸಂಖ್ಯಾತ ಇಲಾಖೆ ಅನುದಾನ ಬಳಸಿಕೊಂಡು ನಗರದಲ್ಲಿ ಅಭಿವೃದ್ದಿ ಕಾಮಗಾರಿಗಳು ನೆರೆವೇರಿವೆ. ನಗರದ ಬಹುತೇಕ ವಾರ್ಡುಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ, ಕೆಲವು ದೊಡ್ಡ ವಾರ್ಡುಗಳಲ್ಲಿ ಮೂಲ ಸೌಕರ್ಯಗಳನ್ನು ಇನ್ನು ವೃದ್ದಿಸಬೇಕಾಗಿದೆ. ಅಭಿವೃದ್ಧಿ ವೇಳೆ ಹಲವಾರು ಸವಾಲುಗಳು ಎದುರಾಗುತ್ತವೆ, ಅವುಗಳನೆಲ್ಲ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳ ಸಹಕಾರದಲ್ಲಿ ನಿವಾರಿಸಿಕೊಂಡು ಮುಂದುವರೆದಿದ್ದೇವೆ ಎಂದು ಹೇಳಿದರು.ಹಲವು ಪ್ರಥಮಗಳಿಗೆ ಕಾರಣ:
ಉದ್ಯಾನವಗಳ ಅಭಿವೃದ್ಧಿ, ಅದರಲ್ಲಿ ದಿನ ಪತ್ರಿಕೆಗಳು ಓದಲು ಅನುಕೂಲವಾಗುವಂತೆ ವಾಚನಾಲಯ ತೆರೆಯಲಾಯಿತು. ಬೀದಿ ಬದಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕಡಿವಾಣ ಹಾಕಲು ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಅಳವಡಿಸಲಾಯಿತು. ಆನಂತರ ಆ ಬ್ಲಾಕ್ ಸ್ಪಾಟ್ ಗಳನ್ನು ಸೌಂದರ್ಯೀಕರಣ ಮಾಡಲಾಯಿತು ಎಂದು ಹೇಳಿದರು.
ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ನಿಯಂತ್ರಿಸಲು 9 ಕಡೆ ಬಟ್ಟೆ ಬ್ಯಾಗ್ಗಳ ವಿತರಣಾ ಯಂತ್ರಗಳನ್ನು ಸ್ಥಾಪಿಸಿದ್ದೇವೆ. ಇದನ್ನು ನೋಡಿ ಪೌರಾಡಳಿತ ಸಚಿವ ಬಾಲಕೃಷ್ಣರವರು ರಾಜ್ಯಾದ್ಯಂತ ಬಟ್ಟೆ ಬ್ಯಾಗ್ ಗಳ ವಿತರಣಾ ಯಂತ್ರಗಳನ್ನು ಅಳವಡಿಸಲು ಆಸಕ್ತಿ ವಹಿಸಿದ್ದಾರೆ. ಹೀಗೆ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವಾರು ಪ್ರಥಮಗಳಿಗೆ ರಾಮನಗರ ನಗರಸಭೆ ಕಾರಣವಾಗಿದೆ ಎಂದು ಹೇಳಿದರು.
ಇದೇ ವೇಳೆ ನಗರಸಭಾ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಆರಿಫ್, ಆಯುಕ್ತ ಡಾ.ಜಯಣ್ಣ ಉಪಸ್ಥಿತರಿದ್ದರು.
ನಮ್ಮ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಪರಿಪೂರ್ಣ ಎಂದು ಹೇಳಲಾಗುವುದಿಲ್ಲ. ಇದು ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ನನ್ನ ಅವಧಿಯಲ್ಲಿ 31 ಚುನಾಯಿತ ಮತ್ತು 5 ಮಂದಿ ನಾಮಾಂಕಿತ ಸದಸ್ಯರ ಸಹಕಾರದೊಂದಿಗೆ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದೇವೆ. ಇದನ್ನು ಗರ್ವದಿಂದ ಹೇಳಿಕೊಳ್ಳುತ್ತೇವೆ.
-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ
ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ವಿಶೇಷ ಸಾಮಾನ್ಯಸಭೆಯಲ್ಲಿ ಮಾತನಾಡಿದರು.