ಕಾನೂನುಬಾಹಿರ ಕೆಲಸಕ್ಕೆ ಪೊಲೀಸರ ಬೆಂಗಾವಲು!

KannadaprabhaNewsNetwork | Published : Oct 27, 2024 2:18 AM

ಸಾರಾಂಶ

ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ತಾವು ಉತ್ಪಾದನೆ ಮಾಡುವ ವಿದ್ಯುತ್ ಸಾಗಾಣಿಕೆ ಮಾಡಲು ಇದೇ ನಿಯಮ ಹೇಳುತ್ತಾರೆ

ಶಿವಕುಮಾರ ಕುಷ್ಟಗಿ ಗದಗ

ಜಿಲ್ಲೆಯ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಗಾಳಿ ವಿದ್ಯುತ್ ಯಂತ್ರ ಅಳವಡಿಸುತ್ತಿರುವ ಕಂಪನಿಗಳು ರೈತರನ್ನು ನಿರಂತರವಾಗಿ ಶೋಷಣೆ ಮಾಡುತ್ತಿವೆ. ರಿನಿವ್ ಪವರ್ ಕಂಪನಿ ಒಂದು ಹೆಜ್ಜೆ ಮುಂದೆ ಹೋಗಿ, ಕಾನೂನು ಬಾಹಿರ ಕೆಲಸಗಳನ್ನು ಕಾನೂನಾತ್ಮಕವಾಗಿಯೇ ಮಾಡಿಕೊಳ್ಳಲು ಪೊಲೀಸರ ಬೆಂಬಲ ಪಡೆಯುತ್ತಿದೆ!

ರಿನಿವ್ ಪವರ್ ಕಂಪನಿಯ ಅಧಿಕಾರಿಗಳು 2024 ಅ. 15ರಂದು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದು, ಮನವಿಯಲ್ಲಿ ಕುರಡಗಿ, ಯರೇಬೇಲೆರಿ, ಅಬ್ಬಿಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ 220 ಕೆವಿ ವಿದ್ಯುತ್ ಪ್ರಸರಣ ಕಂಬದ ತಂತಿ ಜೋಡಣೆ ಹಾಗೂ ತಂತಿ ಎಳೆಯುವ ಕಾಲಕ್ಕೆ ಕೆಲವರು ಅಪರಿಚಿತ ವ್ಯಕ್ತಿಗಳು ಅನಗತ್ಯವಾಗಿ ತೊಂದರೆ ಮಾಡುತ್ತಿದ್ದಾರೆ. ಇದರಿಂದ ಕೆಲಸಕ್ಕೆ ತೊಂದರೆಯಾಗುತ್ತಿದೆ. ನಮಗೆ ಸೂಕ್ತ ಬಂದೋಬಸ್ತ್‌ ಕೊಡಿ ಎಂದು ವಿನಂತಿಸಿ, ಅದಕ್ಕೆ ತಗಲುವ ವೆಚ್ಚ ₹1,59,756 ಸರ್ಕಾರಕ್ಕೆ ಭರಿಸಿ, ಬಂದೋಬಸ್ತ್‌ಗೆ ಪೊಲೀಸ್ ಸಿಬ್ಬಂದಿ ಪಡೆದುಕೊಂಡಿದ್ದಾರೆ. ಪೊಲೀಸರನ್ನು ಮುಂದಿಟ್ಟುಕೊಂಡು ರೈತರನ್ನು ಹೆದರಿಸಿ, ಬೆದರಿಸಿ ರೈತರ ಜಮೀನುಗಳಲ್ಲಿ ವಿದ್ಯುತ್ ಕಂಬ ಮತ್ತು ತಂತಿ ಅಳವಡಿಸಿ ತಮ್ಮ ಕೆಲಸ ಪೂರ್ಣಗೊಳಿಸಿದ್ದಾರೆ.

ಅಸಹಾಯಕರು: ವಿದ್ಯುತ್ ಕಂಬಗಳ ಅಳವಡಿಕೆ ಎನ್ನುವುದು ಆವಶ್ಯಕ ವಿಭಾಗದಲ್ಲಿ ಬರುವ ಹಿನ್ನೆಲೆಯಲ್ಲಿ ಕಂಪನಿಗಳ ವಿದ್ಯುತ್ ಕಂಬ ಎಲ್ಲಿಯಾದರೂ ಅಳವಡಿಸಬಹುದು ಎಂದು ಕಾನೂನು ಹೇಳುತ್ತದೆ ಎಂದು ಕಂಪನಿ ಸಿಬ್ಬಂದಿ ವಾದಿಸುತ್ತಾರೆ. ಈ ಕಾನೂನು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಪೂರೈಕೆ ಮಾಡುವ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಆದರೆ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ತಾವು ಉತ್ಪಾದನೆ ಮಾಡುವ ವಿದ್ಯುತ್ ಸಾಗಾಣಿಕೆ ಮಾಡಲು ಇದೇ ನಿಯಮ ಹೇಳುತ್ತಾರೆ. ರೈತರು ಯಾವುದೇ ಕಾರಣಕ್ಕೂ ನಮ್ಮನ್ನು ಪ್ರಶ್ನೆ ಮಾಡುವಂತಿಲ್ಲ ಎನ್ನುತ್ತಿದ್ದಾರೆ. ಇನ್ನೊಂದೆಡೆ ಕಾನೂನಿನಲ್ಲಿರುವ ಸೂಕ್ಷ್ಮತೆಯನ್ನೇ ಅವಕಾಶವನ್ನಾಗಿ ಮಾಡಿಕೊಂಡು ಸರ್ಕಾರಕ್ಕೆ ಹಣ ಭರಿಸಿ ಅಧಿಕೃತವಾಗಿಯೇ ಪೊಲೀಸ್ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ರೈತರು, ಇನ್ನೊಂದೆಡೆ ಪೊಲೀಸರು ಈ ಪ್ರಕರಣದಲ್ಲಿ ಅಸಹಾಯಕರು ಆಗುವಂತಾಗಿದೆ.

ನಿಯಮ ಏನು ಹೇಳುತ್ತದೆ?: ವಿದ್ಯುತ್ ಕಂಬ ಅಳವಡಿಸುವುದು ಸಾರ್ವಜನಿಕರ ಉಪಯೋಗಕ್ಕಾಗಿ, ಹಾಗಾಗಿ ಇದು ಅವಶ್ಯಕ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಆದರೆ ಅದೇ ಕಾನೂನು, ರೈತರ ಜಮೀನುಗಳಲ್ಲಿ ಕಂಬ ಅಳವಡಿಸುವ ಸಂದರ್ಭದಲ್ಲಿ ರೈತರ ಜಮೀನುಗಳಲ್ಲಿ ಬೆಳೆಗಳು ಇರಬಾರದು, ಇದರಿಂದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಮುಖ್ಯವಾಗಿ ರೈತರಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಅಗತ್ಯ ಪರಿಹಾರ ತಲುಪಿ ರೈತರು ಒಪ್ಪಿಗೆ ನೀಡಿದ ನಂತರವೇ ಕೆಲಸ ಕಾರ್ಯ ಮಾಡಬೇಕಿದೆ. ಆದರೆ ನರೇಗಲ್ಲ ಹೋಬಳಿಯಲ್ಲಿ ಈ ಎಲ್ಲ ನಿಯಮ ಗಾಳಿಗೆ ತೂರಿ, ಕೇವಲ ರೈತರನ್ನು ಭಯಪಡಿಸಿ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ಕಾರ್ಯ ನಡೆಸುತ್ತಿವೆ.

ಭಯದಲ್ಲಿ ಜನರು: ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿಯೇ ಒಟ್ಟು 200ಕ್ಕೂ ಹೆಚ್ಚು ಗಾಳಿ ವಿದ್ಯುತ್ ಉತ್ಪಾದನಾ ಯಂತ್ರಗಳ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದೆ. ಇದಕ್ಕಾಗಿ ಪ್ರತಿ ಗ್ರಾಮದಲ್ಲಿಯೂ ಏಜೆಂಟರು ಹುಟ್ಟಿಕೊಂಡಿದ್ದು, ಅವರು ಹೇಳಿದರೆ ಮಾತ್ರ ಆ ರೈತರ ಜಮೀನುಗಳಲ್ಲಿ ಯಂತ್ರ ಅಳವಡಿಸುತ್ತಾರೆ. ಒಂದೊಮ್ಮೆ ರೈತರು ಒಪ್ಪಿಗೆ ಸೂಚಿಸಿದರೆ ಮುಗಿಯಿತು, ಅವರ ಹೊಲದಲ್ಲಿಯೇ ಅವರು ಹೊರಗಿನವರಂತೆ ನಿಂತು ನೋಡಬೇಕು. ಇಲ್ಲವೇ ಕಂಪನಿಯವರು ತಮ್ಮ ಏಜೆಂಟರ ಮೂಲಕ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಹಾಗಾಗಿ ರೈತರು ಸೇರಿದಂತೆ ಗಾಳಿಯಂತ್ರ ಅಳವಡಿಕೆಯಾಗುತ್ತಿರುವ ಗ್ರಾಮಗಳ ಜನರು ಭಯದಲ್ಲಿ ಬದುಕುವಂತಾಗಿದೆ.

ರೈತರಿಗೆ ಯಾವುದೇ ರೀತಿಯಲ್ಲಿ ಕಾನೂನಾತ್ಮಕವಾಗಿ ತೊಂದರೆ ಮಾಡಿದ್ದರೆ ಸಂಬಂಧಿಸಿದ ಇಲಾಖೆಗೆ (ಹೆಸ್ಕಾಂ), ಜಿಲ್ಲಾಧಿಕಾರಿಗಳಿಗೆ, ನಮ್ಮ ಇಲಾಖೆಯ ಗಮನಕ್ಕೆ ತಂದಲ್ಲಿ ಅದನ್ನು ಸೂಕ್ತವಾಗಿ ಪರಿಹರಿಸಲಾಗುವುದು. ರೈತರ ಹಿತ ಹಾಗೂ ಕಾನೂನು ಸುವ್ಯವಸ್ಥೆ ಕೂಡಾ ಅಷ್ಟೇ ಮುಖ್ಯ. ಕಂಪನಿಯವರು ಕಾನೂನಾತ್ಮಕವಾಗಿ ಸರ್ಕಾರಕ್ಕೆ ಹಣ ಭರಣ ಮಾಡಿ ಸಿಬ್ಬಂದಿಯನ್ನು ಪೂರೈಸುವಂತೆ ವಿನಂತಿಸಿದ ಹಿನ್ನೆಲೆಯಲ್ಲಿ ಪೂರೈಕೆ ಮಾಡಲಾಗಿದೆ. ನಮ್ಮ ಸಿಬ್ಬಂದಿ ಯಾವುದೇ ರೈತರಿಗೆ ಅನ್ಯಾಯವಾಗಲು ಅ‍ವಕಾಶ ನೀಡಿಲ್ಲ ಎಂದು ಗದಗ ಎಸ್ಪಿ ಬಿ.ಎಸ್.ನೇಮಗೌಡ್ರ ಹೇಳಿದರು.

Share this article