;Resize=(412,232))
ಬೆಂಗಳೂರು : ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಠಾಣೆಯಲ್ಲೇ ಲಾಕಪ್ ಕೀ ನುಂಗಿ ಆತ್ಮ*ತ್ಯೆ ಮಾಡಿಕೊಳ್ಳಲು ಯತ್ನಿಸಿ ಪೊಲೀಸರಿಗೆ ತಲೆಬಿಸಿ ಉಂಟು ಮಾಡಿದ ಘಟನೆ ನಡೆದಿದ್ದು, ಕಳೆದ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಜತೆಗೆ ಬರೋಬ್ಬರಿ 10 ಕೆ.ಜಿ. ಬಾಳೆಹಣ್ಣು ತಿನ್ನಿಸಿ ಕೀ ತೆಗೆಸುವಲ್ಲಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಳ್ಳಾರಿ ಮೂಲಕ ಕಾರ್ತಿಕ್ ಅಲಿಯಾಸ್ ರಾಮು (24) ಆತ್ಮ*ತ್ಯೆಗೆ ಯತ್ನಿಸಿದ ಆರೋಪಿ. ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್, ಏ.24ರಂದು 17 ವರ್ಷದ ಯುವತಿಯನ್ನು ತನ್ನೊಂದಿಗೆ ಕರೆದೊಯ್ದಿದ್ದ. ಈ ಸಂಬಂಧ ಬಾಲಕಿಯ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಕಾರ್ತಿಕ್ ಬಾಲಕಿಯನ್ನು ಕರೆದೊಯ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ನಂತರ ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಂಡಿದ್ದರು.
ಠಾಣೆಯಲ್ಲಿದ್ದಾಗಲೇ ಆರೋಪಿ ಲಾಕಪ್ ಕೀ ನುಂಗಿ ಆತ್ಮ*ತ್ಯೆಗೆ ಯತ್ನಿಸಿದ್ದಾನೆ. ಅದರಿಂದ ಗಾಬರಿಗೊಂಡ ಪೊಲೀಸರು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತತ ಮೂರು ದಿನಗಳ ಕಾಲ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಅಲ್ಲದೆ, ಆ ಮೂರು ದಿನಗಳ ಕಾಲ ಬರೋಬ್ಬರಿ 10 ಕೆ.ಜಿ.ಬಾಳೆಹಣ್ಣು ತಿನ್ನಿಸಿದ್ದಾರೆ. ಬಳಿಕ ಶೌಚಾಲಯಕ್ಕೆ ಹೋದಾಗ ಕೀ ಹೊರಬಂದಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಆರೋಪಿಯನ್ನು ವಿಚಾರಣೆ ನಡೆಸಿ ಪೋಕ್ಸೋ ಪ್ರಕರಣದ ಜತೆಗೆ ಸರ್ಕಾರಿ ನೌಕರರಿಗೆ ಆತಂಕ ಸೃಷ್ಟಿಸಿದ ಆರೋಪದ ಮೇರೆಗೆ ಇತರೆ ಸೆಕ್ಷನ್‌ಗಳನ್ನು ವಿಧಿಸಿ ಕೋರ್ಟ್ ಮೂಲಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.