ಸಮಸ್ಯೆ ಪರಿಹಾರಕ್ಕಾಗಿ ಮನೆ ಮನೆಗೆ ಪೊಲೀಸ್‌: ಜಾಹ್ನವಿ

KannadaprabhaNewsNetwork |  
Published : Jul 30, 2025, 12:48 AM IST
ಹರಪನಹಳ್ಳಿ ಪಟ್ಟಣದ ತರಳ ಬಾಳು ಕಲ್ಯಾಣ ಮಂಟಪದಲ್ಲಿ ಪೋಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಮನೆ ಮನೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯನಗರ ಜಿಲ್ಲಾ ಎಸ್ಪಿ ಜಾಹ್ನವಿ ನೆರವೇರಿಸಿದರು.ಡಿವೈಎಸ್ಪಿ ಡಾ.ವೆಂಕಟಪ್ಪ ನಾಯಕ, ಸಿಪಿಐಗಳಾದ ಮಹಂತೇಶ ಸಜ್ಜನ, ಬೂಸರೆಡ್ಡಿ ಇತರರು ಇದ್ದರು. | Kannada Prabha

ಸಾರಾಂಶ

ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸುವ ಜತೆಗೆ ಅವರ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶಕ್ಕಾಗಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸುವ ಜತೆಗೆ ಅವರ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶಕ್ಕಾಗಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹೇಳಿದ್ದಾರೆ. ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಹರಪನಹಳ್ಳಿ ಉಪ ವಿಭಾಗದಿಂದ ಸೋಮವಾರ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪೊಲೀಸ್ ಇಲಾಖೆಯ ಸಿಬ್ಬಂದಿ ಸಾರ್ವಜನಿಕರ ಮನೆ ಬಳಿ ಹೋದಾಗ ಸಹಕರಿಸಬೇಕು. ಪ್ರತಿಯೊಬ್ಬರೂ ಅಪರಾಧಗಳ ಬಗ್ಗೆ ಜಾಗೃತಿ ಹೊಂದುವ ಅಗತ್ಯವಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯ ಮೊಬೈಲ್ ಸಂಖ್ಯೆಯನ್ನು ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು ಎಂದರು.

ಮನೆಯ ಬಳಿ ಪೊಲೀಸರು ಬಂದಾಗ ಕೇವಲ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಲ್ಲದೆ, ಇತರ ದೂರುಗಳನ್ನು ಅವರಿಗೆ ನೀಡಬಹುದಾಗಿದೆ. ಇತ್ತೀಚೆಗೆ ಸೈಬರ್‌ ಕ್ರೈಂ ಹೆಚ್ಚುತ್ತಿದ್ದು ಜಾಗೃತಿ ವಹಿಸುವ ಅಗತ್ಯವಿದೆ. ಅಪರಿಚಿತರು ಕಂಡು ಬಂದರೆ ಕೂಡಲೇ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಪೊಲೀಸರಿಗೆ ಮಾಹಿತಿ ಕೊಡುವಾಗ ಯಾವುದೇ ಭಯಪಡುವ ಅಗತ್ಯವಿಲ್ಲ, ಇದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.

ಡಿವೈಎಸ್ಪಿ ಡಾ. ವೆಂಕಟಪ್ಪ ನಾಯಕ ಮಾತನಾಡಿ, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅಗತ್ಯವಾಗಿದೆ. ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆ ಅತ್ಯಂತ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದೆ. ಅನ್ಯಾಯಕ್ಕೊಳಗಾದವರಿಗೆ ಸೂಕ್ತ ಕಾನೂನು ತಿಳಿವಳಿಕೆ ಮೂಲಕ ನ್ಯಾಯ ಒದಗಿಸುವ ಯತ್ನವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸಣ್ಣ ಪುಟ್ಟ ಸಮಸ್ಯೆಗಳನ್ನು ಗ್ರಾಮೀಣ ಭಾಗದಲ್ಲಿಯೇ ಬಗೆಹರಿಸಿಕೊಂಡರೆ ಒಳ್ಳೆಯದು ಎಂದ ಅವರು, ಕಾರ್ಯಕ್ರಮದ ಉದ್ದೇಶ ಜನರಿಗೆ ತಿಳಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ ಮಾತನಾಡಿ, ಪಟ್ಟಣದ ಎಲ್ಲಾ 27 ವಾರ್ಡ್‌ಗಳಲ್ಲೂ ಅರಿವು ಕಾರ್ಯಕ್ರಮ ಮಾಡಬೇಕು ಎಂದು ಸಲಹೆ ನೀಡಿದರು.

ಹರಪನಹಳ್ಳಿ ಸಿಪಿಐ ಮಹಾಂತೇಶ ಜಿ. ಸಜ್ಜನ್, ಹಡಗಲಿ‌ ಸಿಪಿಐ ಬೂಸರೆಡ್ಡಿ, ಹರಪನಹಳ್ಳಿ ಪಿಎಸ್ಐ ಶಂಭುಲಿಂಗ ಸಿ. ಹಿರೇಮಠ, ಹಲುವಾಗಲು ಪಿಎಸ್ಐ ಕಿರಣ್ ಕುಮಾರ್, ಅರಸೀಕೆರೆ ಪಿಎಸ್ಐ ರಂಗಯ್ಯ, ಚಿಗಟೇರಿ ಪಿಎಸ್ಐ ನಾಗರತ್ನಮ್ಮ ಹಾಗೂ ಹೂವಿನ ಹಡಗಲಿ ತಾಲೂಕಿನ ಪಿಎಸ್‌ ಐ ಸಿಬ್ಬಂದಿ ಪಾಲ್ಗೊಂಡಿದ್ದರು.

PREV

Recommended Stories

ಕೂಡಲೇ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿ : ತೇಜಸ್ವಿ ಆಗ್ರಹ
ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!