ಉಚಿತ ಆರೋಗ್ಯ ತಪಾಸಣೆಯಲ್ಲಿ ಉದ್ಘಾಟನೆ ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಆಹಾರ ಪದ್ದತಿಯಲ್ಲೇ ನಮ್ಮ ಆರೋಗ್ಯದ ಗುಟ್ಟು ಅಡಗಿದೆ ಎಂದು ನಂದಿಪುರ ಸುಕ್ಷೇತ್ರದ ಡಾ. ಮಹೇಶ್ವರ ಸ್ವಾಮೀಜಿ ತಿಳಿಸಿದರು.ಪಟ್ಟಣದ ಸುಭಿಕ್ಷಾ ಆರೋಗ್ಯ ಕೇಂದ್ರದಲ್ಲಿ ಶ್ರೀಗುರು ದೊಡ್ಡ ಬಸವೇಶ್ವರ ಪ್ರತಿಷ್ಠಾನದಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಶಾಖೆ, ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಜಗತ್ತಿನ ಒತ್ತಡದ ಬದುಕು ಅನಾರೋಗ್ಯಕ್ಕೆ ದಾರಿ ಮಾಡುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ರೋಗಕ್ಕೆ ತುತ್ತಾಗುತ್ತಿರುವುದು ಆತಂಕಕಾರಿಯಾಗಿದೆ. ಆಯುರ್ವೇದ ಔಷಧಿಗಳಿಂದ ಅಡ್ಡಪರಿಣಾಮಗಳಿಲ್ಲ. ಹಿತಮಿತ ಆಹಾರ, ಯೋಗ, ಧ್ಯಾನ, ಭಜನೆ ಸೇರಿ ನಾನಾ ಧನಾತ್ಮಕ ಚಟುವಟಿಕೆಗಳು ವ್ಯಕ್ತಿಯನ್ನು ರೋಗ ಮತ್ತು ಔಷಧಿಗಳಿಂದ ದೂರ ಉಳಿಸುತ್ತವೆ. ಆಹಾರ ಪದ್ದತಿಯಲ್ಲಿ ಸಮತೋಲನತೆ ಕಾಪಾಡಿಕೊಳ್ಳುವ ಅಗತ್ಯತೆ ಇದೆ ಎಂದರು.ಪಾರಂಪರಿಕ ವೈದ್ಯ ಡಾ. ವಿ.ಮಂಜುನಾಥ ಮಾತನಾಡಿ, ಅತಿಯಾದ ಆಸೆಯಿಂದಾಗಿ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಔಷಧಿಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಮನುಷ್ಯನ ತೇಜಸ್ಸು ಕುಂದುತ್ತದೆ. ಪಾರಂಪರಿಕ ಔಷಧಿಗಳನ್ನು ಆಯುರ್ವೇದ ವೈದ್ಯರ ಸೂಚನೆಯಂತೆ ಉಪಯೋಗಿಸಬೇಕು ಎಂದರು.