ಸಾರ್ವಜನಿಕರಲ್ಲಿ ಪೊಲೀಸ್ ಎಂದರೆ ಭಯದ ಕಲ್ಪನೆಯಿದ್ದು, ವಾಸ್ತವದಲ್ಲಿ ಪೊಲೀಸ್ ಒಂದು ರಕ್ಷಣಾ ಪಡೆಯಾಗಿದೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಸಾರ್ವಜನಿಕರಲ್ಲಿ ಪೊಲೀಸ್ ಎಂದರೆ ಭಯದ ಕಲ್ಪನೆಯಿದ್ದು, ವಾಸ್ತವದಲ್ಲಿ ಪೊಲೀಸ್ ಒಂದು ರಕ್ಷಣಾ ಪಡೆಯಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನವನಗರದ ಪೊಲೀಸ್ ಹುತಾತ್ಮರ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸವಾಲುಗಳ ಇಲಾಖೆ. ನಾಡಿನ ಭದ್ರತೆಗಾಗಿ ದೇಶದ ಗಡಿ ಕಾಯುವ ಸೈನಿಕರಂತೆ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಯುವ ಪೊಲೀಸರು ಪ್ರಾಣ ತ್ಯಾಗ, ತಮ್ಮ ಜೀವ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಇದ್ದಾರೆ. ಪೊಲೀಸರ ಜೀವನ ಕಷ್ಟಕರವಾದದ್ದು. ಕೆಲಸದ ಒತ್ತಡದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಆರೋಗ್ಯದತ್ತ ಗಮನ ನೀಡುವುದನ್ನು ಮರೆಯಬಾರದು ಎಂದರು. ಸಾರ್ವಜನಿಕರ ಆಸ್ತಿಪಾಸ್ತಿ ಉಳಿಸಲು, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತೇವೆ ಎಂದು ಪೊಲೀಸರು ಹೆಮ್ಮೆ ಪಡಬೇಕು. ಬದಲಾದ ಪರಿಸ್ಥಿತಿಯಲ್ಲಿ ಸಮಾಜ ಘಾತುಕರ ಸಂಖ್ಯೆ ಹೆಚ್ಚಾಗಿ ಅಪರಾಧ ಸ್ವರೂಪವೂ ಬದಲಾಗಿದೆ. ಇಂತಹ ಸವಾಲುಗಳಿಗೆ ತಂತ್ರಜ್ಞಾನ ಬಳಿಸಿ ವೈಜ್ಞಾನಿಕ ತರಬೇತಿ ನೀಡಿದಲ್ಲಿ ಅಪರಾಧಗಳನ್ನು ತಡೆಯಬಹುದು. ಪೊಲೀಸ್ ಇಲಾಖೆಯಲ್ಲಿ ಸೌಲಭ್ಯಗಳ ಕುರಿತು ಸಾಕಷ್ಟು ಕೊರತೆಗಳಿದ್ದು, ಅವುಗಳನ್ನು ನಿವಾರಿಸುವಲ್ಲಿ ಸರ್ಕಾರ ಮತ್ತು ಸಾರ್ವಜನಿಕ ವಲಯ ಆಸಕ್ತಿ ವಹಿಸಬೇಕಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸ್ವಾಗತಿಸಿ ಮಾತನಾಡಿ, ಒಂದು ವರ್ಷದಲ್ಲಿ ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಾಣ ತ್ಯಾಗ ಮಾಡಿದ ರಾಷ್ಟ್ರದ 189 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಹೆಸರನ್ನು ಓದಿ, ಅಕ್ಟೋಬರ್ 21ರಂದು ಹುತಾತ್ಮರಾದ ಪೊಲೀಸರನ್ನು ನೆನೆದು ಅವರ ಕುಟುಂಬಗಳಿಗೆ ಧೈರ್ಯ ತುಂಬುವ ದಿನವಾಗಿದೆ ಎಂದು ಹೇಳಿದರು. ವಿವಿಧ ಗಣ್ಯರು, ಹುತಾತ್ಮರಾದ ಪೊಲೀಸರ ಕುಟುಂಬದವರು, ರೈತರು, ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳು ಹುತಾತ್ಮ ಸ್ಮಾರಕಕ್ಕೆ ಪುಷ್ಪ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಡಿಎಆರ್ , ಆರ್ ಎಸ್ ಐ ಶಿವಾನಂದ ಜೇವರ್ಗಿ ಅವರ ನಾಯಕತ್ವದಲ್ಲಿ ಪರೇಡ್ ಮೂಲಕ ಗೌರವ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ತಂಡ ಅತ್ಯಂತ್ಯ ಸುಮಧುರವಾಗಿ ವಾದ್ಯಗಳನ್ನು ನುಡಿಸಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಇತರರು ಉಪಸ್ಥಿತರಿದ್ದರು. ಮಹಾಂತೇಶ ಮತ್ತು ಆರ್.ಬಿ.ಕುರಿ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.