ಮಸೀದಿ, ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಮಸೀದಿ, ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ
ಕನ್ನಡಪ್ರಭ ವಾರ್ತೆ ತಾಳಿಕೋಟೆ 2007ರಲ್ಲಿ ಜಾರಿಯಾದ ಪಬ್ಲಿಕ್ ಸೆಫ್ಟಿ ಆ್ಯಕ್ಟ್ ಪ್ರಕಾರ ದೇವಸ್ಥಾನ, ಮಸೀದಿಗಳಲ್ಲಿ ದರ್ಶನಕ್ಕೆ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿದ್ದರೆ ಅಂತಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಅಹಿತಕರ ಘಟನೆಗಳನ್ನು ತಡೆಯಬಹುದು. ಶೀಘ್ರದಲ್ಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಹೇಳಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ಪೊಲೀಸ್ ಇಲಾಖೆ ವತಿಯಿಂದ ನವರಾತ್ರಿ ಉತ್ಸವ ಹಿನ್ನೆಲೆ ಶ್ರೀ ದೇವಿಯ ಮೂರ್ತಿ ಪ್ರತಿಷ್ಠಾಪನಾ ಸಮಿತಿಯವರ ಹಾಗೂ ಶಾಂತಿ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಇದರಿಂದ ಅಹಿತಕರ ಘಟನೆಗಳು ಜರುಗಿದರೆ ಆರೋಪಿಗಳನ್ನು ಪತ್ತೆಹಚ್ಚಲು ಸಹಾಯವಾಗಲಿದೆ ಎಂದರು. ಬೆಳಗಾವಿಯಲ್ಲಿ ಈ ಹಿಂದೆ ನಾನು ಕಾರ್ಯನಿರ್ವಹಿಸುವ ಸಮಯದಲ್ಲಿ ಒಂದು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿಯೇ ಸುಮಾರು 12,600 ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ನಡೆದಿತ್ತು ಎಂದು ನೆನಪಿಸಿಕೊಂಡರು. ತಾಳಿಕೋಟೆಯಲ್ಲಿ ನವರಾತ್ರಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಬೇಕು ಎಂದು ಸಲಹೆ ನೀಡಿದ ಅವರು, ಇಲಾಖೆಯಿಂದ ನೀಡಬೇಕಾದ ಸಹಕಾರವನ್ನು ನೀಡುತ್ತೇವೆ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದ ಅವರು, ಕಳ್ಳತನ ಪ್ರಕರಣ ತಡೆಯಲು ನಾಗರಿಕರು ಬೇರೆ ಊರಿಗೆ ಅಥವಾ 3-4 ದಿನಗಳ ಕಾಲ ಬೇರಡೆಗೆ ಹೋಗುವವರಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ ಹೋದರೆ ಅನುಕೂಲ ಎಂದರು. ಸ್ಥಳೀಯ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಮನಗೌಡ ಸಂಕನಾಳ ಮಾತನಾಡಿ, ತಾಳಿಕೋಟೆಯ ಜನ ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಹಬ್ಬಗಳಾಗಲಿ ಎಲ್ಲರೂ ಸೇರಿ ಆಚರಿಸಬೇಕು. ಮಾನವೀಯತೆ ಬಿಟ್ಟು ಯಾವ ಧರ್ಮವೂ ಇಲ್ಲ. ಮಾನವೀಯತೆ ಇಲ್ಲದವರು ಮನುಷ್ಯರೆ ಅಲ್ಲವೆಂದರು. ದೇವರ ಹಬ್ಬ ಆಚರಣೆಯಲ್ಲಿ ಭಕ್ತಿಭಾವ ಇರಬೇಕೇ ಹೊರತು ಬೇರೆಯವರ ಭಾವನೆಗಳಿಗೆ ಧಕ್ಕೆಯಾಗುವಂತೆ, ಸಮಾಜದ ಶಾಂತಿ ಹಾಳು ಮಾಡುವ ಕೆಲಸ ಆಗಬಾರದು. ಒಳ್ಳೆಯ ಮನಸ್ಸು ಸಂಬಂಧ ಬೆಸೆಯುತ್ತದೆ. ಆದರೆ ಕೆಟ್ಟ ಮನಸ್ಸು ಸಂಬಂಧ ಹಾಳುಗೆಡುವುತ್ತದೆ. ಇದನ್ನು ಅರ್ಥೈಸಿಕೊಂಡು ನಡೆಯಬೇಕು. ಪಟ್ಟಣದಲ್ಲಿ ಯಾವುದೇ ಕಳ್ಳತನ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಮೆಸೇಜ್‌ ಬಿಡಲಾಗುತ್ತದೆ ಎಂದರು. ಪುರಸಭಾ ಮಾಜಿ ಅಧ್ಯಕ್ಷ ಧಶರಥಸಿಂಗ್ ಮನಗೂಳಿ ಮಾತನಾಡಿ, ಯಾವುದೇ ಹಬ್ಬ ಹರಿದಿನಗಳಾಗಲಿ ಸಂಬಂಧಿತ ಬಡಾವಣೆಯ ಹಾಗೂ ಉತ್ಸವ ಸಮಿತಿಯವರು ಸ್ವಯಂ ಸೇವಕರನ್ನು ನೇಮಿಸಿಯಾವುದೇ ತರಹದ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು. ಮುಸ್ಲಿಂ ಸಮಾಜದ ಮುಖಂಡ ಶಮಶುದ್ದೀನ್ ನಾಲಬಂದ, ಜೈಭೀಮ ಮುತ್ತಗಿ, ಮಹಾಂತೇಶ ಮುರಾಳ ಮಾತನಾಡಿದರು. ಕಾಮನಕಟ್ಟಿ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಶ್ರೀದೇವಿ ಉತ್ಸವ ಸಮಿತಿಯ ಮುಖಂಡ ಶರಣಗೌಡ ಪಾಟೀಲ, ತಿಲಕ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗುವ ಉತ್ಸವ ಸಮಿತಿಯ ಉಸ್ತುವಾರಿ ಸುವರ್ಣ ಬಿರಾದಾರ ಹಾಗೂ ರಜಪೂತ ಗಲ್ಲಿ ಹಾಗೂ ಶಿವಾಜಿ ಮಹಾರಾಜ ಸರ್ಕಲ್‌ನಲ್ಲಿ ಪ್ರತಿಷ್ಠಾಪನೆ ಸಮಿತಿಯ ಮುಖಂಡ ಜೈಸಿಂಗ್ ಮೂಲಿಮನಿ ತಮ್ಮ ಬಡಾವಣೆಯಲ್ಲಿ ಉತ್ಸವ ಕುರಿತು ಜರುಗುತ್ತಿರುವ ಕಾರ್ಯಕ್ರಮಗಳ ವಿವರಣೆಯನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು. ಹರಿಸಿಂಗ್ ಮೂಲಿಮನಿ, ಪ್ರಕಾಶ ಹಜೇರಿ, ಗೋವಿಂದಸಿಂಗ್ ಮೂಲಿಮನಿ, ಅಣ್ಣಾಜಿ ಜಗತಾಪ, ಪರಶುರಾಮ ತಂಗಡಗಿ, ಮೈಹಿಬೂಬ ಕೇಂಭಾವಿ, ಹಸನ ಮನಗೂಳಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ವಿಠ್ಠಲಸಿಂಗ್ ಹಜೇರಿ, ಏಕನಾಥ ಬಬಲೇಶ್ವರ, ಕಿರಣ ಬಳಗಾನೂರ, ಸಾಬಣ್ಣ ಭಜಂತ್ರಿ, ಜಮಲಶ್ಯಾ ಮೋಮಿನ್ ಉಪಸ್ಥಿತರಿದ್ದರು. ಅಪರಾಧ ವಿಭಾಗ ಪಿ.ಎಸ್.ಐ. ಆರ್.ಎಸ್. ಭಂಗಿ ಸ್ವಾಗತಿಸಿ ವಂದಿಸಿದರು.

Share this article