Police must discharge their duties in a manner that wins public appreciation: Amit Singh
ಉಡುಪಿ: ಉಡುಪಿಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ 14ನೇ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮವು ನಗರದ ಡಿಎಆರ್ ಪೊಲೀಸ್ ಗ್ರೌಂಡ್ - ಚಂದು ಮೈದಾನದಲ್ಲಿ ನಡೆಯಿತು.
ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಅವರು ನೂತನ ಪೊಲೀಸ್ ಸಿಬ್ಬಂದಿಗಳಿಂದ ಗೌರವ ರಕ್ಷೆ ಸ್ವೀಕರಿಸಿ, ಮಾತನಾಡಿ ಶುಭ ಹಾರೈಸಿದರು. ಹತ್ತು ತಿಂಗಳ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ತಮ್ಮ ಜೀವನವನ್ನು ಸಮಾಜದ ಸೇವೆಗೆ ಮುಡುಪಾಗಿಟ್ಟು ಜನ ಮೆಚ್ಚುವಂತೆ ಕರ್ತವ್ಯ ನಿರ್ವಹಿಸಬೇಕು. ಇನ್ನುಮುಂದೆ ಸೇವೆ, ತ್ಯಾಗ, ಬದ್ಧತೆ ಜೀವನದ ಉದ್ದೇಶವಾಗಿರಬೇಕು. ಇದು ಜೀವಮಾನಪೂರ್ತಿ ನೆನಪಿನಲ್ಲಿ ಇಡಬೇಕಾದ ದಿನ. ತರಬೇತಿಯ ಮೊದಲು ಮತ್ತು ತರಬೇತಿಯ ನಂತರ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ ಇಂದಿನಿಂದ ಅರಿವಿಗೆ ಬರುತ್ತದೆ ಎಂದರು.ಪೊಲೀಸ್ ಇಲಾಖೆ ಎನ್ನುವುದು ಶಿಸ್ತಿನ ಇಲಾಖೆ. ಪ್ರಶಿಕ್ಷಣಾರ್ಥಿಗಳು ಶಿಸ್ತನ್ನು ಸರಿಯಾಗಿ ಪಾಲಿಸಬೇಕು. ಅಸಾಧಾರಣ ಸಂದರ್ಭದಲ್ಲಿಯೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಯಾವುದೇ ಸಮಯದಲ್ಲಿಯೂ ಕರ್ತವ್ಯ ನಿರ್ವಹಿಸಲು ಸನ್ನದ್ಧರಾಗಿರಬೇಕು ಎನ್ನುವ ಕಾರಣಕ್ಕೆ ಕಠಿಣ ತರಬೇತಿ ನೀಡಲಾಗಿದೆ. ಸಂವಿಧಾನದ ಆಶಯಕ್ಕೆ ಬದ್ಧವಾಗಿ ಕರ್ತವ್ಯ ನಿರ್ವಹಿಸಿ ಸಮವಸ್ತ್ರಕ್ಕೆ ನ್ಯಾಯ ಒದಗಿಸಬೇಕು ಎಂದರು.ಈ ಕಾರ್ಯಕ್ರಮದಲ್ಲಿ 13 ಜನ ಮಾಜಿ ಸೈನಿಕರು ಸೇರಿದಂತೆ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿ ಪಡೆದ ಒಟ್ಟು 99 ಜನ ಪ್ರಶಿಕ್ಷಣಾರ್ಥಿಗಳು ತರಬೇತಿ ಪೂರ್ಣಗೊಳಿಸಿ ಆಕರ್ಷಕ ನಿರ್ಗಮನ ಪಥ ಸಂಚಲನ ನಡೆಸಿದರು. ಅವರಿಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸ್ವಾಗತಿಸಿದರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ್ ಪ್ರತಿಜ್ಞಾವಿಧಿ ಬೋಧಿಸಿ ವರದಿ ವಾಚಿಸಿ ವಂದಿಸಿದರು, ಎಪಿಸಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.