ಹುಬ್ಬಳ್ಳಿ:
ಆದರೆ, ರೈತ ಸಂಘದ ಕಾರ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ, ಪೊಲೀಸರ ವಿಚಾರಣೆಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಆಗಿದ್ದೇನು?ಉಮಚಗಿ ಗ್ರಾಮದ ರೈತ ನಿಂಗಪ್ಪ ಕೋಟೆಪ್ಪ ಅಂಗಡಿ (48) ಮಾ.7ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಗ್ರಾಪಂ ಸದಸ್ಯೆ ಹಾಗೂ ಆತನ ನಡುವೆ ನಡೆದಿದ್ದ ಜಗಳದಿಂದಾಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ವಿಚಾರಣೆಗೆ ಪೊಲೀಸರು ಕರೆದಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ಮಾಹಿತಿ ಕೇಳಿ ಬಂದಿತ್ತು.
ಇದೀಗ ಮೃತ ರೈತನ ಪತ್ನಿ ರೇಣುಕಾ ಅಂಗಡಿ ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಗ್ರಾಪಂ ಸದಸ್ಯೆ ಹಾಗೂ ಅವರ ಕಡೆಯವರು ಪತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಪೊಲೀಸರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನನ್ನ ಪತಿಗೂ ಮತ್ತು ಗ್ರಾಪಂ ಸದಸ್ಯೆ ನಡುವೆ ಜೆಜೆಎಂ ಕಾಮಗಾರಿ ಸಲುವಾಗಿ ವಾಗ್ವಾದ ನಡೆದಿತು. ಆ ವೇಳೆಯಲ್ಲಿ ಸದಸ್ಯೆಯ ಕಡೆವರು ಹಲ್ಲೆ ಮಾಡಿ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಆ ಭಯದಿಂದಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ತೆಗದುಕೊಳ್ಳಬೇಕು. ಈಗಾಗಲೇ ಘಟನೆ ಕುರಿತು ಸಿಪಿಐ ಮುರುಗೇಶ ಚನ್ನಣ್ಣನವರ ಅವರಿಗೂ ಲಿಖಿತವಾಗಿ ದೂರು ನೀಡಿದ್ದೇವೆ. ಅವರು ಸಹ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.ಮೃತನ ಸಹೋದರ ಶಂಕರೆಪ್ಪ ಅಂಗಡಿ ಮಾತನಾಡಿ, ನಮಗೆ ಜಾನುವಾರುಗಳಿದ್ದು ಮನೆ ಎದುರು ಜೆಜೆಎಂ ಕಾಮಗಾರಿ ತಗ್ಗನ್ನು ಒಂದೇ ದಿನದಲ್ಲಿ ತೆಗೆದು ಪೈಪ್‌ಲೈನ್ ಹಾಕುವಂತೆ ಗ್ರಾಪಂ ಸದಸ್ಯರಿಗೆ ಮನವಿ ಮಾಡಿದ್ದೇವು. ಆಗ ಅವರ ಕಡೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು. ಇದ್ದರಿಂದ ನನ್ನ ಸಹೋದರ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡಿದ್ದಾನೆ. ಇದರ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಮೇಗಳಮನಿ, ಮುಖಂಡ ವೀರಣ್ಣ ಬಿರಾದಾರ ದೇಸಾಯಿ, ಕೊಟ್ಟೆಪ್ಪ ಅಂಗಡಿ, ಮಹಾಂತೇಶ ಅಂಗಡಿ ಸೇರಿದಂತೆ ಅನೇಕರಿದ್ದರು.ಪೊಲೀಸರಿಂದ ಬೆದರಿಕೆರೈತನ ಆತ್ಮಹತ್ಯೆ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು. ಜತೆಗೆ ಗ್ರಾಮೀಣ ಠಾಣೆಯ ಇನಸ್ಪೆಕ್ಟರ್ ಮುರುಗೇಶ ಚೆನ್ನಣ್ಣವರ ಅವರನ್ನು ಅಮಾನತುಪಡಿಸಬೇಕು ಎಂದು ಕರ್ನಾಟಕ ರೈತ ಸಂಘ- ರೈತ ಬಣದ ಕಾರ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ವಿಚಾರಣೆ ಮಾಡುವುದಿದ್ದು ಠಾಣೆಗೆ ಬರುವಂತೆ ಇನಸ್ಪೆಕ್ಟರ್ ದೂರವಾಣಿ ಮೂಲಕ ಹೇಳಿದ್ದಾರೆ. ಇದರಿಂದ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಕಾರಣವಾದ ಇನಸ್ಪೆಕ್ಟರ್ ಅಮಾನತು ಮಾಡಿ ತನಿಖೆ ನಡೆಸಬೇಕು. ಜತೆಗೆ ಈ ರೀತಿಯ ಪೊಲೀಸ್ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.