ಕನ್ನಡಪ್ರಭ ವಾರ್ತೆ ಮುಧೋಳ
ಬ್ರಿಟಿಷರ ಆಡಳಿತ ಕಾಲದಿಂದ ನಡೆದುಕೊಂಡು ಬಂದಿರುವ ಅಪರೂಪದ ಐತಿಹಾಸಿಕ ಸಂಪ್ರದಾಯವನ್ನು ಈ ಬಾರಿಯೂ ಭಕ್ತಿಪೂರ್ವಕವಾಗಿ ಮುಂದುವರಿಸಲಾಯಿತು. ರಥೋತ್ಸವದ ಪ್ರಮುಖ ವಿಶೇಷತೆಯೆಂದರೆ, ರಥವು ಸಾಗುವ ಮಾರ್ಗಮಧ್ಯೆ ಮುಧೋಳ ಪೊಲೀಸ್ ಠಾಣೆಯ ಆವರಣಕ್ಕೆ ಪ್ರವೇಶಿಸಿ ಬಳಿಕ ಮರಳುವುದು. ಸಂಪ್ರದಾಯದಂತೆ ರಥವು ಪೊಲೀಸ್ ಠಾಣೆಯ ಆವರಣಕ್ಕೆ ಆಗಮಿಸುತ್ತಿದ್ದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಕ್ತಿಯಿಂದ ಸ್ವಾಗತಿಸಿದರು. ಜಮಖಂಡಿ ಡಿವೈಎಸ್ಪಿ ರೋಷನ್ ಜಮೀರ್ ಅಹ್ಮದ್, ಸಿಪಿಐ ಎಂ.ಎನ್. ನಾಗರಡ್ಡಿ, ಪಿಎಸ್‌ಐ ಶಿವಾನಂದ ಕಾರಜೋಳ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ನೂರಾರು ಭಕ್ತರು ಪಾಲ್ಗೊಂಡರು.
ಈ ವೇಳೆ ತೆಂಗಿನಕಾಯಿ ಒಡೆದು, ಕರ್ಪೂರ ಬೆಳಗಿ ವಿಶೇಷ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ರಥೋತ್ಸವವು ತನ್ನ ಸಾಂಪ್ರದಾಯಿಕ ಮಾರ್ಗದಲ್ಲಿ ಮುಂದುವರಿಯಿತು.ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಈ ಐತಿಹಾಸಿಕ ಸಂಪ್ರದಾಯ ಇಂದಿಗೂ ನಿರಂತರವಾಗಿ ಆಚರಣೆಯಲ್ಲಿರುವುದು ಮುಧೋಳ ನಗರದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆಯೊಂದಿಗೆ ಧಾರ್ಮಿಕ ಶ್ರದ್ಧೆಯನ್ನೂ ಮೆರೆದ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.