ಕನ್ನಡಪ್ರಭ ವಾರ್ತೆ ಯಾದಗಿರಿ
ಪಡಿತರ ಅಕ್ಕಿ ಅಕ್ರಮ ದಂಧೆಯಲ್ಲಿ ತೊಡಗಿದ್ದಾನೆನ್ನಲಾದ ಚಾಮನಾಳದ ಮಲ್ಲಿಕ್ ಎಂಬಾತನ ಹುಟ್ಟುಹಬ್ಬಕ್ಕೆ ಕೆಲವು ಪೊಲೀಸ್ ಅಧಿಕಾರಿಗಳ ಗುಂಪು ತಡರಾತ್ರಿವರೆಗೆ ನಡೆಸಿದ ಸಂತೋಷಕೂಟದ ಈ ವೀಡಿಯೋ ಖಾಕಿಪಡೆಯ ಕಾರ್ಯವೈಖರಿ ಪ್ರಶ್ನಿಸಿದಂತಾಗಿದೆ. ಡಿವೈಎಸ್ಪಿ ಇನಾಂದಾರ್ ಹಾಗೂ ಇನ್ಸಪೆಕ್ಟರ್ ಉಮೇಶ ಸೇರಿದಂತೆ ಹಲವರ ಉಪಸ್ಥಿತಿ ಖಾಕಿಪಡೆಯ ಕಾರ್ಯವೈಖರಿಗೆ ಓರೆ ಹಚ್ಚಿದಂತಾಗಿದೆ.ಅಕ್ರಮದ ದೂರುಗಳು ಕೇಳಿಬಂದಾಗ ಇಂತಹವರ ವಿರುದ್ಧ ಪೊಲೀಸರು ದೂರು ದಾಖಲಿಸುತ್ತಾರೆಯೇ ? ಪ್ರಾಮಾಣಿಕ ತನಿಖೆ ನಡೆಸುತ್ತಾರೆಯೇ ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ.
ಈ ಹಿಂದೆ, ಕೆಲವು ಪ್ರಕರಣಗಳಲ್ಲಿ ಈತನ ರಕ್ಷಣೆಗೆ ಸುರಪುರದ ಡಿವೈಎಸ್ಪಿ ಜಾವೀದ್ ಇನಾಂದಾರ್ ಮುಂದಾಗಿದ್ದರು ಎಂಬುದಾಗಿ ದೂರಲಾಗಿತ್ತು. ಹಾಗಂತ, ಇಂತಹ ಔತಣಕೂಟಗಳು, ಹುಟ್ಟುಹಬ್ಬದ ಸನ್ಮಾನಗಳು ಖಾಕಿಪಡೆಗೆ ಹೊಸದೇನಲ್ಲ. ಖಾಕಿಪಡೆಯ ಗುಂಪೊಂದು ನಡು ಬಗ್ಗಿಸಿ ಸಲಾಮು ಹೊಡೆಯುತ್ತದೆ. ಆಯಕಟ್ಟಿನ ಸ್ಥಳಗಳಲ್ಲಿ ವರ್ಗಾವಣೆಗೆ ಮಾಲೀಕನ ಕೃಪೆಗಾಗಿ ಕಾಯುತ್ತಿರುತ್ತಾರೆ. ಕೆಲವು ಅಧಿಕಾರಿಗಳ ಅಕ್ರಮ ಆಸ್ತಿ ಮಲ್ಲಿಕ್ ಹಾಗೂ ಸಂಬಂಧಿಕರ ಹೆಸರಲ್ಲಿ ಇವೆ ಎಂಬ ಮಾತುಗಳು ಇಲ್ಲಿ ಸರ್ವೇ ಸಾಮಾನ್ಯ. ಚುನಾವಣೆಗಳಲ್ಲಿ ದೇಣಿಗೆ ಬರುವ ಕಾರಣಕ್ಕೆ ರಾಜಕೀಯ ಪ್ರಭಾವಿಗಳ ಶ್ರೀರಕ್ಷೆಯೂ ಇದೆಯಂತೆ.ಯಾದಗಿರಿ ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣಗಳು ಕಳೆದ ಕೆಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿವೆ. ಗುರುಮಠಕಲ್, ಶಹಾಪುರ ಹಾಗೂ ಕೆಂಭಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಕುರಿತು ಇತ್ತೀಚಿನ ಐದು ವರ್ಷಗಳಲ್ಲಿ ಅನೇಕ ಪ್ರಕರಣಗಳೂ ದಾಖಲಾಗಿವೆ. ಇಲ್ಲಿನ ಪಡಿತರ ಅಕ್ಕಿ ಪಾಲಿಶ್ ಆಗಿ ಫಾರಿನ್‌ಗೆ ಮಾರಾಟವಾಗುತ್ತದೆ. ಈ ಕುರಿತು "ಕನ್ನಡಪ್ರಭ "ದ ಸರಣಿ ವರದಿಗಳು ಈ ದಂಧೆಯ ಕರಾಳಮುಖ ಬಯಲಾಗಿಸಿದ್ದವು.