ಹೊಸಪೇಟೆ: ಇಲ್ಲಿನ ಪೊಲೀಸರು ವೈಜ್ಞಾನಿಕ ತನಿಖೆ ಕೈಗೊಂಡು ₹20.74 ಲಕ್ಷ ಮೌಲ್ಯದ 123 ಮೊಬೈಲ್‌ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಶ್ರೀಹರಿಬಾಬು, ಇಲ್ಲಿನ ಪಟ್ಟಣ ಠಾಣೆಯಲ್ಲಿ 65, ಗ್ರಾಮೀಣ ಠಾಣೆ 29, ಚಿತ್ತವಾಡ್ಗಿ ಠಾಣೆ 6, ಕಮಲಾಪುರ ಠಾಣೆ 17, ಹಂಪಿ ಪ್ರವಾಸಿ ಠಾಣೆ 2, ಟಿಬಿ ಡ್ಯಾಂ ಠಾಣೆ 3 ಮತ್ತು ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಒಂದು ಮೊಬೈಲ್ ಕಳೆದು ಹೋಗಿತ್ತು. ಈ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಲಾಗಿದೆ ಎಂದರು.ಈ ಮೊಬೈಲ್‌ಗಳನ್ನು ಅಸ್ಸಾಂ, ಬಿಹಾರ, ಜಾರ್ಖಂಡ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು.
ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಟಿ. ಮಂಜುನಾಥ, ಪಿಎಸ್‌ಐ ವಿರೂಪಾಕ್ಷಪ್ಪ, ಸಿಬ್ಬಂದಿ ನಂದಿನಿ, ಕುಮಾರ ನಾಯ್ಕ ಶ್ರಮವಹಿಸಿ ಪತ್ತೆ ಹಚ್ಚಿದ್ದಾರೆ ಎಂದು ಎಸ್ಪಿ ಶ್ಲಾಘಿಸಿದರು.ಆರೋಪಿ ಸೆರೆ: ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಜಾಲೇರ ಓಣಿಯಲ್ಲಿ ಕಳ್ಳತನ ಮಾಡಿದ ಆರೋಪದ ಮೇರೆಗೆ ಆರೋಪಿ ಓರ್ವನನ್ನು ಬಂಧಿಸಿದ್ದಾರೆ. ಬಂಧಿತನಿಂದ ₹11.25 ಲಕ್ಷ ಬೆಳೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಹುಬ್ಬಳ್ಳಿ ಕೇಶ್ವಾಪುರದ ನಿವಾಸಿ ಮಹಮದ್ ಅಲಿ ನಾಲಬಂದಿ ಎಂದು ಗುರುತಿಸಲಾಗಿದೆ. ನಗರದ ಜಾಲೇರ ಓಣಿಯ ಮನೆಯಲ್ಲಿ ಫೆ. 25ರಂದು ಕಳ್ಳತನವಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮ್ಯಾರಥಾನ್ ಆಯೋಜನೆ: ಮಾ. 9ರಂದು ಬೆಳಗ್ಗೆ 8 ಗಂಟೆಗೆ ನಗರದ ತುಂಗಭದ್ರಾ ಜಲಾಶಯದ ಬಳಿಯಿಂದ ನಗರದ ಸಾಯಿಬಾಬಾ ವೃತ್ತದ ವರೆಗೆ ಐದು ಕಿ.ಮೀ. ಮತ್ತು 10 ಕಿ.ಮೀ. ಮ್ಯಾರಥಾನ್ ಆಯೋಜಿಸಲಾಗಿದೆ. ಈ ಓಟದಲ್ಲಿ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ನೌಕರರು ಹಾಗೂ ಸಾರ್ವಜನಿಕರು ಭಾಗವಹಿಸಲು ಕೋರಲಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ತಿಳಿಸಿದ್ದಾರೆ.ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದೊಂದಿಗೆ ವ್ಯಸನಮುಕ್ತ ರಾಜ್ಯ ಮತ್ತು ನಾಗರಿಕ ದೈಹಿಕ ಸದೃಢಕ್ಕಾಗಿ ಈ ಓಟ ಆಯೋಜಿಸಲಾಗಿದೆ ಎಂದೂ ತಿಳಿಸಿದ್ದಾರೆ.