ಕನ್ನಡಪ್ರಭ ವಾರ್ತೆ ಮಾಲೂರು
ನಿತ್ಯ ಕೆಲಸದ ಒತ್ತಡದಲ್ಲಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ, ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉತ್ತಮ ಚಿಕಿತ್ಸೆ ಪಡೆಯಬೇಕು ಎಂದು ಡಾ.ಕಿರಣ್ ಸೋಮಣ್ಣ ಹೇಳಿದರು.ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಮಾರಿಕಾಂಬ ಪಾಲಿ ಕ್ಲಿನಿಕ್ ಮತ್ತು ಡೈಗ್ನೋಸ್ಟಿಕ್ ಸೆಂಟರ್ ಜಾಲಪ್ಪ ಆಸ್ಪತ್ರೆ ಹಾಗೂ ನಾರಾಯಣ ಹಾರ್ಟ್ ಸೆಂಟರ್ ನ ಡಾ.ಕಿರಣ್ ಸೋಮಣ್ಣ ಅವರ ಸಹಯೋಗದೊಂದಿಗೆ ಪರಿಣಿತ ವೈದ್ಯರಿಂದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಆರೋಗ್ಯವೇ ಮಹಾಭಾಗ್ಯ ಎಂಬಂತೆ ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು ತಮ್ಮ ಕೆಲಸ- ಕಾರ್ಯಗಳ ಒತ್ತಡದ ನಡುವೆ ಆರೋಗ್ಯಕ್ಕೆ ಹೆಚ್ಚು ಗಮನ ಹರಿಸಬೇಕು. ಆಗ ಮಾತ್ರ ನಾವು ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಾರಿಕಾಂಬ ದೇವಾಲಯ ಟ್ರಸ್ಟಿನವರು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣದ ಜನತೆಯ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಮಾರಿಕಾಂಬ ದೇವಾಲಯ ಟ್ರಸ್ಟಿನ ಅಧ್ಯಕ್ಷ ಪಿ.ವೆಂಕಟೇಶ್ ಮಾತನಾಡಿ, ದೇವಾಲಯಕ್ಕೆ ಬಂದ ಭಕ್ತಾದಿಗಳು ಹುಂಡಿಗೆ ಅರ್ಪಿಸುವ ಕಾಣಿಕೆ ರೂಪದ ಹಣವನ್ನು ಬಳಸಿಕೊಂಡು ದೇವಾಲಯ ಟ್ರಸ್ಟಿನ ವತಿಯಿಂದ, ಸಾರ್ವಜನಿಕರ ಸಹಕಾರದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು, ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ೧೩ ವರ್ಷಗಳಿಂದ ಮಾರಿಕಾಂಬ ದೇವಾಲಯ ಟ್ರಸ್ಟ್ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ೬ ಶುದ್ಧ ಕುಡಿಯುವ ನೀರಿನ ಘಟಕಗಳು, ಸಾಮಾನ್ಯ ಜನತೆಗೂ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವುದರಲ್ಲಿ ಹೆಚ್ಚು ಗಮನ ಹರಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಬಡಮಕ್ಕಳ ಶಿಕ್ಷಣ ಅನುಕೂಲಕ್ಕಾಗಿ ಪಟ್ಟಣದ ಕುಂಬಾರಪೇಟೆಯಲ್ಲಿ ಶಿಥಿಲಗೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ತೆರವುಗೊಳಿಸಿ, ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಸಂತ್, ಡಾ. ಹರೀಶ್, ಪೊಲೀಸ್ ಇನ್ಸ್ಪೆಕ್ಟರ್ ವಸಂತ್, ಸಬ್ ಇನ್ಸ್ ಪೆಕ್ಟರ್‌ಗಳಾದ ವರಲಕ್ಷ್ಮಿ, ಗೀತಮ್ಮ, ನಾರಾಯಣ ಹೃದಯಾಲಯದ ಡಾ. ಕಿರಣ್‌ಕುಮಾರ್, ಪಿಆರ್‌ಓ ವೆಂಕಟರಾಮ್ ರೆಡ್ಡಿ, ಎಕೋ ತಂತ್ರಜ್ಞೆ ಸಲಾ ದೇವಿ, ಸಿಬ್ಬಂದಿ ರಮೇಶ್, ಮಾರುತಿ ಮಾರಿಕಾಂಬ ಪಾಲಿ ಕ್ಲಿನಿಕ್‌ನ ನಾರಾಯಣಸ್ವಾಮಿ, ರಘುನಾಥ್, ತನುಶ್ರೀ, ವನಿತಾ, ಗೀತಾ, ಮಾರಿಕಾಂಬ ದೇವಾಲಯ ಟ್ರಸ್ಟ್ ನ ವ್ಯವಸ್ಥಾಪಕ ಮಂಜುನಾಥ್ ಹಾಜರಿದ್ದರು.