ಪೊಲೀಸರಿಗೆ ಲಿಂಗ ಸೂಕ್ಷ್ಮತೆಯ ಅರಿವಿರಬೇಕು

KannadaprabhaNewsNetwork |  
Published : Mar 13, 2026, 01:15 AM IST
9999999 | Kannada Prabha

ಸಾರಾಂಶ

ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಲಿಂಗ ಸೂಕ್ಷ್ಮತೆಯಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಕಿವಿಮಾತು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಲಿಂಗ ಸೂಕ್ಷ್ಮತೆಯಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಕಿವಿಮಾತು ಹೇಳಿದ್ದಾರೆ. ಜಿಲ್ಲೆಯ ಬಾಲಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರ ದೂರು ಹಾಗೂ ಅಹವಾಲುಗಳನ್ನು ಆಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೊಲೀಸ್ ಠಾಣೆಗಳಿಗೆ ಹೋದ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಹಿಳೆಯರಿಗೆ ಸೌಜನ್ಯದ ಮಾತುಗಳನ್ನಾಡದೆ ಅಗೌರವದಿಂದ ನಡೆಸಿಕೊಂಡ ಬಗ್ಗೆ ಸಭೆಯಲ್ಲಿ ಕೆಲವು ಪ್ರಕರಣಗಳನ್ನು ಗಮನಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅಥವಾ ಯಾವುದೇ ಸರ್ಕಾರಿ ಇಲಾಖೆ ವ್ಯವಹರಿಸುವಾಗ ಲಿಂಗ ಸೂಕ್ಷ್ಮತೆಯನ್ನು ಅರಿಯಬೇಕು. ಮಹಿಳೆಯರಿಗೆ ಸರಿಯಾದ ಸ್ಪಂದನೆ ಸಿಗಬೇಕೆಂಬ ಹಿನ್ನೆಲೆಯಲ್ಲಿ ಹಾಗೂ ಸಂಬಂಧಿಸಿದ ಅಧೀನ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡುವಂತೆ ತಿಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅಥವಾ ಇನ್ನಿತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಿಯಾದ ಸ್ಪಂದನೆ ಸಿಗದಿದ್ದರೆ ಇಲಾಖೆ ಬಗ್ಗೆ ಜನರಲ್ಲಿ ವಿಶ್ವಾಸ ಹೋಗುತ್ತದೆ. ಅಂತಹ ಕಳಂಕವನ್ನು ತರದಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.

ಇಂದಿನ ಅಹವಾಲು ಸ್ವೀಕಾರ ಸಭೆಯಲ್ಲಿ ಮಹಿಳೆಯರ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿದೆ ಎಂಬ ವಿಶ್ವಾಸ ನನಗಿದೆ. ಸಂಬಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಅಹವಾಲುಗಳಿಗೆ ಉತ್ತರ ನೀಡಿದ್ದಾರೆ ಹಾಗೂ ಸಮಸ್ಯೆಗೆ ಸ್ಪಂದನೆ ನೀಡಿದ್ದಾರೆ ಎಂದ ಅವರು, ಪ್ರತಿ ಬಾರಿ ಮಹಿಳಾ ಆಯೋಗವೇ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಮನಸ್ಥಿತಿಯನ್ನು ಅಧಿಕಾರಿಗಳು ಬದಿಗಿರಿಸಿ ತಮ್ಮ ವ್ಯಾಪ್ತಿಯಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಹಾಗೂ ಅವರ ಸಮಸ್ಯೆಗೆ ಸ್ಪಂದನೆಯನ್ನು ನೀಡಬೇಕಿದೆ. ತಿಂಗಳಿಗೊಮ್ಮೆಯಾದರೂ ಪಂಚಾಯ್ತಿ ಮಟ್ಟದಲ್ಲಿ ಮಹಿಳೆಯರ ಗ್ರಾಮ ಸಭೆ ನಡೆಸಿದಲ್ಲಿ ಮಹಿಳೆಯರ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.

ರಾಜ್ಯದಾದ್ಯಂತ 29 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ರಾಯಚೂರು ಬಿಟ್ಟರೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಹಿಳಾ ಸಮಸ್ಯೆಗಳನ್ನು ಹಾಗೂ ದೂರುಗಳನ್ನು ಸ್ವೀಕರಿಸಲಾಗಿದೆ. ಬಾಣಂತಿಯರನ್ನೂ ಊರಿಂದ ಹೊರಗಿಡುವ ಅನಿಷ್ಠ ಪದ್ಧತಿ ಈ ಜಿಲ್ಲೆಯಲ್ಲಿ ಇದ್ದು, ಈ ಮೌಢ್ಯವನ್ನು ತೊಡೆದು ಹಾಕಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಕಾನೂನನ್ನು ನಿರ್ದಾಕ್ಷಿಣ್ಯವಾಗಿ ಜಾರಿಗಳಿಸಿದಾಗ ಮಾತ್ರ ಮೌಢ್ಯತೆಯ ಜನರಲ್ಲಿ ಜಾಗೃತಿ ಮೂಡಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕಿದೆ ಎಂದರು.

ತುಮಕೂರಿನ ಹನುಮಂತಪುರದ ನಾಗಮಣಿ ಎಂಬ ಮಹಿಳೆ ತಮ್ಮ 3 ತಿಂಗಳ ಮಗುವಿನೊಂದಿಗೆ ಆಗಮಿಸಿ ಮಹಿಳೆಯರ ಕ್ಷೇಮಾಭಿವೃದ್ದಿಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಮಹಿಳೆಯರಿಗೆ ಶಕ್ತಿಯಾಗಿರುವ ಆಯೋಗದ ಅಧ್ಯಕ್ಷರಾದ ತಾವು ತಮ್ಮ ಮಗುವಿಗೆ ನಾಮಕರಣ ಮಾಡಬೇಕೆಂದು ಕೋರಿಕೆಯಿಟ್ಟಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಚಿರಾಗ್ ಎಂದು ನಾಮಕರಣ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಈಶ್ವರಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ತುಮಕೂರು ಮಹಾನಗರಪಾಲಿಕೆ ಆಯುಕ್ತೆ ಶುಭ ಬಿ., ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ: ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅಡಿಗಲ್ಲುಗಳು: ಜಿ.ಮುನಿರೆಡ್ಡಿ
ಕರ್ನಾಟಕದ ರಫ್ತುಗಳ ಭವಿಷ್ಯ ಅತ್ಯಂತ ಪ್ರಕಾಶಮಾನ