ಗಾಂಜಾ, ಜೂಜಾಟ ತಡೆಗೆ ಪೊಲೀಸರು ಮುಂದಾಗಬೇಕು: ಶಾಸಕ ಶರಣಗೌಡ ಕಂದಕೂರು

KannadaprabhaNewsNetwork |  
Published : Mar 01, 2025, 01:04 AM IST
ಗುರುಮಠಕಲ್ ತಾಲೂಕಿನ ಅನಪೂರ ಗ್ರಾಮದಲ್ಲಿ ನಡೆದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭವನ್ನು ಶಾಸಕ ಶರಣಗೌಡ ಕಂದಕೂರು ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ತೆಲಂಗಾಣ ಗಡಿಭಾಗದ ವ್ಯಾಪ್ತಿಯಲ್ಲಿರುವ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ಗಾಂಜಾ ಸರಬರಾಜು ಆಗುವ ಜತೆಗೆ ಮಟ್ಕಾ ಮತ್ತು ಜೂಜಾಟ ಜೋರಾಗಿದೆ ಎನ್ನಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕಾಗಿದೆ ಎಂದು ವೇದಿಕೆಯ ಮೂಲಕ ತಿಳಿಸುತ್ತಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರು ಆಗ್ರಹಿಸಿದರು.

ಅಡಿಗಲ್ಲು ಸಮಾರಂಭ । ಅನಪೂರ, ದುಪ್ಪಲ್ಲಿ, ಪುಟಪಾಕ್, ಚಂಡರಕಿ ಗ್ರಾಮಗಳ ಕಾಮಗಾರಿಗಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಗುರುಮಠಕಲ್‌

ತೆಲಂಗಾಣ ಗಡಿಭಾಗದ ವ್ಯಾಪ್ತಿಯಲ್ಲಿರುವ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ಗಾಂಜಾ ಸರಬರಾಜು ಆಗುವ ಜತೆಗೆ ಮಟ್ಕಾ ಮತ್ತು ಜೂಜಾಟ ಜೋರಾಗಿದೆ ಎನ್ನಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕಾಗಿದೆ ಎಂದು ವೇದಿಕೆಯ ಮೂಲಕ ತಿಳಿಸುತ್ತಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರು ಆಗ್ರಹಿಸಿದರು.

ತಾಲೂಕಿನ ಅನಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಅನಪೂರ, ದುಪ್ಪಲ್ಲಿ, ಪುಟಪಾಕ್, ಚಂಡರಕಿ ಮುಂತಾದ ಗ್ರಾಮಗಳ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಉತ್ತಮ ಆರೋಗ್ಯ ಹಾಗೂ ಉತ್ತಮ ಶಿಕ್ಷಣ ಮತ್ತು ಶುದ್ದ ಕುಡಿಯುವ ನೀರು ಲಭ್ಯವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುವಾಗ ಜೂಜಾಟ ಹಾವಳಿಯಿಂದ, ಗಾಂಜಾ ಸೇವನೆಯಿಂದ ಕ್ಷೇತ್ರದ ನನ್ನ ಜನರ ಆರೋಗ್ಯ ಮೇಲೆ ಮತ್ತು ಅರ್ಥಿಕ ಮೇಲೆ ಹಾಗೂ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪೊಲೀಸರು ಈ ಕಡೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಗಡಿ ಭಾಗದಿಂದ ಗಾಂಜಾ ಸರಬರಾಜು ಆಗುವುದನ್ನು ಚೆಕ್‌ಪೋಸ್ಟ್‌ನಲ್ಲಿ ಪರಿಶೀಲಿಸಿ ವಾಹನಗಳನ್ನು ಬಿಡಬೇಕು. ಕ್ಷೇತ್ರದ ಯುವ ಜನರು ಗಾಂಜಾ ಮತ್ತಿನಲ್ಲಿ ಬಿದ್ದೀದ್ದಾರೆ ಎನ್ನಲಾಗುತ್ತಿದೆ. ನನ್ನ ಸಹೋದರರ ಸುಂದರವಾದ ಭವಿಷ್ಯಕ್ಕಾಗಿ ಗಾಂಜಾ ಸೇವನೆಯಿಂದ ಮುಕ್ತಿಗೊಳಿಸಬೇಕಾಗಿದೆ ಎಂದು ಹೇಳಿದರು.

ಅಕ್ಷರ ಅವಿಷ್ಕಾರ ಅನುಷ್ಠಾನ ಯೋಜನೆಯಡಿಯಲ್ಲಿ ಅನಪೂರ ಗ್ರಾಮದ ಶಾಲೆಗೆ 47 ಲಕ್ಷ ರು. ಹಾಗೂ ಪುಟಪಾಕ ಗ್ರಾಮದ ಸರ್ಕಾರಿ ಶಾಲೆಗೆ 51 ಲಕ್ಷ ರು.ಬಿಡುಗಡೆಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಶಾಲೆ ಕೋಣೆಗಳ ದುರಸ್ತಿ, ಶುದ್ಧ ನೀರಿನ ಪೂರೈಕೆ, ಗಣಕಯಂತ್ರ ಕೋಣೆ, ಪ್ರಯೋಗಲಾಯ ಮುಂತಾದ ಸಲಕರಣೆಗಳನ್ನು ಖರೀದಿಸಲಾಗಿದೆ. ಅನಪೂರ ಗ್ರಾಮದ ಸರ್ಕಾರಿ ಹಿರಿಯ ಹಾಗೂ ಪ್ರೌಢ ಶಾಲೆಗೆ ತಲಾ 2 ಕೋಣೆಗಳ ನಿರ್ಮಾಣ ಮತ್ತು ಸಲಕರಣೆಗಳ ಅಡಿಗಲ್ಲು, ಚಂಡರಕಿ, ಪುಟಪಾಕ್ ಗ್ರಾಮದಲ್ಲಿ ಪೈಪ್‌ಲೈನ್ ಕಾಮಗಾರಿ ಮತ್ತು ಚಂಡರಕಿ ಗ್ರಾಮದ ಕೋಟೆಹಳ್ಳಕ್ಕೆ ಬ್ರಿಡ್ಜ್ ನಿರ್ಮಾಣ ಮುಂತಾದವುಗಳಿಗೆ ಅಡಿಗಲ್ಲು ಸಮಾರಂಭ ಮಾಡಿದ್ದೇನೆ ಎಂದು ಶಾಸಕರು ವಿವರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ ಕಟೆಕಟೆ, ಜಿಲ್ಲಾ ಕಾರ್ಯದರ್ಶಿ ಶರಣು ಅವುಂಟಿ, ಬ್ಲಾಕ ಅಧ್ಯಕ್ಷ ಪ್ರಕಾಶ ನಿರೇಟಿ, ಹಿರಿಯ ಮುಖಂಡರಾದ ಜಿ. ತಮ್ಮಣ್ಣ, ಲಕ್ಷ್ಮಿರೆಡ್ಡಿ, ಕೃಷ್ಣ ನಸಲವಾಯಿ, ಕಿಷ್ಟರೆಡ್ಡಿ ಪೊಲೀಸ್ ಪಾಟಿಲ್, ಜ್ಞಾನೇಶ್ವರರೆಡ್ಡಿ, ಮಲ್ಲಿಕಾರ್ಜುನ ಅರುಣಿ, ಬಸಣ್ಣ ದೇವರಹಳ್ಳಿ, ನವಾಜ್ ರೆಡ್ಡಿ, ಉಪತಹಸೀಲ್ದಾರ್ ನರಸಿಂಹಲು, ಬಸವರಾಜ ಸಜ್ಜನ್ ಸೇರಿದಂತೆ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ