ಶಶಿಕಾಂತ ಮೆಂಡೆಗಾರ
ತೆಲಗು ಹಾಗೂ ಕನ್ನಡದಲ್ಲಿ ಸಾಕಷ್ಟು ಸದ್ದು ಮಾಡಿದ್ದ ದೃಶ್ಯಂ ಸಿನೆಮಾ ಎಲ್ಲರಿಗೂ ಗೊತ್ತಿದೆ. ಆಕಸ್ಮಿಕವಾಗಿ ನಡೆದ ಯುವಕನ ಕೊಲೆಯೊಂದನ್ನು ಮುಚ್ಚಿಹಾಕುವುದು ಹಾಗೂ ಪೊಲೀಸರಿಗೆ ಸಂಶಯ ಬಾರದಂತೆ ಹೇಗೆಲ್ಲ ವರ್ತಿಸಬೇಕು ಎಂದು ಪತ್ನಿ-ಮಕ್ಕಳಿಗೆ ಚಿತ್ರದ ನಾಯಕ ಹೇಳಿಕೊಡುತ್ತಾನೆ. ಅಂತಹದ್ದೆ ಒಂದು ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನೆಟ್ಟಿ.ಪಿ.ಎ ಗ್ರಾಮದಲ್ಲೂ ನಡೆದಿದೆ. ಮಾಡಿದ ಕೊಲೆಯನ್ನು ಮುಚ್ಚಿಹಾಕಿ, ತಮ್ಮ ಮೇಲೆ ಬಾರದಂತೆ ಹೇಗೆ ಯಾಮಾರಿಸಬೇಕು ಎಂದು ಸ್ವತಃ ಮಗನೇ ತಂದೆ-ತಾಯಿಗೆ ತರಬೇತಿ ನೀಡಿದ್ದ. ಖಾಕಿಗಳು ನಡೆಸಿದ ಬ್ರೈನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್ ಪ್ರಯೋಗಗಳಿಂದ ದೃಶ್ಯಂ ರೀತಿ ಮರ್ಡರ್ ಮಾಡಿದ್ದ ಮೂವರು ಆರೋಪಿಗಳು ಈಗ ಖಾಕಿ ಬಲೆಗೆ ಬಿದ್ದಿದ್ದಾರೆ.
ತಾನು ಕೆಲಸಕ್ಕೆ ಹೋಗುತ್ತಿದ್ದ ಜಮೀನಿನ ಗೌಡತಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಜಮೀನು ಕೆಲಸದಾಳನ್ನು ಗೌಡತಿ ಮಗನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಬಳಿಕ ಪ್ರಕರಣ ಹೊರ ಬೀಳದಂತೆ ದೃಶ್ಯಂ ಸಿನಿಮಾದಂತೆ ಪ್ಲಾನ್ ರೂಪಿಸಿದ್ದ. ಆದರೆ ಆರು ತಿಂಗಳ ಬಳಿಕ ಪೊಲೀಸರು ಬ್ರೈನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್ ಮೂಲಕ ಹಂತಕರ ಹೆಡೆಮುರಿ ಕಟ್ಟಿದ್ದಾರೆ.ಮಗ ಮಾಡಿದ ಕೊಲೆಗೆ, ತಂದೆ-ತಾಯಿ ಸಾಥ್:
2025 ಮೇ 31ರಂದು ಸಿಂದಗಿ ತಾಲೂಕಿನ ಬನ್ನೆಟ್ಟಿ.ಪಿ.ಎ ಗ್ರಾಮದಲ್ಲಿ ತೋಟದ ಕೆಲಸದಾಳು ಮಹಾದೇವಪ್ಪ ಹರಿಜನ (ಪೂಜಾರಿ) ಹತ್ಯೆ ನಡೆದಿತ್ತು.ಬನ್ನೆಟ್ಟಿ.ಪಿ.ಎ ಗ್ರಾಮದ ನಿವಾಸಿ ಹಾಗೂ ಸರ್ಕಾರಿ ಸರ್ವೇಯರ್ ಆಗಿರುವ ಅಪ್ಪುಗೌಡ ಗಂಗರೆಡ್ಡಿ ತನ್ನ ತಾಯಿ ಮಲ್ಲಮ್ಮಳ ಜೊತೆಗೆ ಮಹಾದೇವಪ್ಪ ಅನೈತಿಕ ಸಂಬಂಧ ಹೊಂದಿದ್ದಾನೆಂದು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಬಳಿಕ ತಾಯಿ ಮಲ್ಲಮ್ಮ ಹಾಗೂ ತಂದೆ ಸಿದ್ದನಗೌಡನ ಸಹಾಯದೊಂದಿಗೆ ಶವವನ್ನು ಬೇರೆ ಜಮೀನೊಂದರ ಮುಳ್ಳು ಕಂಟಿಯಲ್ಲಿ ಬಿಸಾಕಿದ್ದರು.
ಕೊಲೆ ಮಾಡಿದ ಬಳಿಕ ಪೊಲೀಸರು ವಿಚಾರಣೆಗೆ ಬಂದಾಗ ಧೈರ್ಯದಿಂದ ಹೇಗೆಲ್ಲ ವರ್ತಿಸಬೇಕು. ಹೇಗೆ ಪ್ರಕರಣದಲ್ಲಿ ಸಿಲುಕಿಕೊಳ್ಳದಂತೆ ಬಚಾವ್ ಆಗಬೇಕು ಎನ್ನುವ ಬಗ್ಗೆ ತಂದೆ ತಾಯಿಗೆ ಮಗ ಅಪ್ಪುಗೌಡ ತರಬೇತಿ ನೀಡಿದ್ದನು.ಖಾಕಿಗಳಿಗೆ ಈ ಕೇಸ್ ತಲೆಬಿಸಿಯಾಗಿತ್ತು:
ಈ ಕೊಲೆಯಲ್ಲಿ ಹಂತಕರು ಯಾರು ಎನ್ನುವುದೇ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಕೊಲೆ ಮಾಡಿದ್ದ ಸರ್ವೇಯರ್ ಅಪ್ಪುಗೌಡ ಚಾಣಾಕ್ಷತನದಿಂದ ಎಲ್ಲ ಸಾಕ್ಷಿಗಳನ್ನು ನಾಶ ಮಾಡಿದ್ದ. ಹೀಗಾಗಿ ಜಟಿಲವಾಗಿದ್ದ ಕೇಸ್ ತಮ್ಮ ಸುಪರ್ದಿಗೆ ಪಡೆದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಕೊಲೆಯಾದ ಮಹಾದೇವಪ್ಪ ಕುಟುಂಬ ಹಾಗೂ ಆತ ಕೆಲಸ ಮಾಡುತ್ತಿದ್ದ ಜಮೀನಿನ ಯಜಮಾನಿ ಮಲ್ಲಮ್ಮ, ಆಕೆ ಪುತ್ರ ಅಪ್ಪುಗೌಡ ಹಾಗೂ ಆಕೆಯ ಗಂಡ ಸಿದ್ದನಗೌಡ ಈ ಎಲ್ಲರ ಬ್ರೈನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್ ತಪಾಸಣೆ ಮಾಡಿಸುವ ಮೂಲಕ ಹತ್ಯೆ ನಡೆದ 6 ತಿಂಗಳಲ್ಲೇ ಹತ್ಯಾಕಾಂಡ ಬಯಲಿಗೆಳೆದಿದ್ದಾರೆ. ಬ್ರೈನ್ ಮ್ಯಾಪಿಂಗ್ ವೇಳೆ ಅಪ್ಪುಗೌಡ, ಯಜಮಾನಿ ಮಲ್ಲಮ್ಮ, ಆಕೆ ಗಂಡ ಸಿದ್ದನಗೌಡರೇ ಕೊಲೆ ಆರೋಪಿಗಳೆಂದು ಪತ್ತೆಮಾಡಿರುವ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.ಏನಿದು ಬ್ರೈನ್ ಮ್ಯಾಪಿಂಗ್?:
ಬ್ರೈನ್ ಮ್ಯಾಪಿಂಗ್ ಎಂದರೆ ಮೆದುಳಿನ ವಿವಿಧ ಭಾಗಗಳ ಕಾರ್ಯಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಕ್ಷೆ ಮಾಡಲು ಬಳಸುವ ತಂತ್ರಗಳ ಸಮೂಹ. ಇದು ಮೆದುಳಿನ ಚಟುವಟಿಕೆಗಳನ್ನು ದೃಶ್ಯ ರೂಪದಲ್ಲಿ ತೋರಿಸುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡಲು (ವಿಶೇಷವಾಗಿ ಶಸ್ತ್ರಚಿಕಿತ್ಸೆ) ಮತ್ತು ಮೆದುಳಿನ ಕಾಯಿಲೆಗಳ ಬಗ್ಗೆ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಇದರ ಮೂಲಕ ಮೆದುಳಿನ ಯಾವ ಭಾಗಗಳು ಭಾಷೆ, ಚಲನೆಯ ನಿರ್ದಿಷ್ಟ ಕಾರ್ಯಗಳಿಗೆ ಸಂಬಂಧಿಸಿದ್ದನ್ನು ಕಂಡುಹಿಡಿಯಬಹುದಾಗಿದೆ.ಪಾಲಿಗ್ರಾಫ್ ಬಳಕೆ ಏಕೆ?:
ಪಾಲಿಗ್ರಾಫ್ ಇದು ಇದು ರಕ್ತದೊತ್ತಡ, ನಾಡಿಮಿಡಿತ, ಉಸಿರಾಟ ಮತ್ತು ಚರ್ಮದ ವಾಹಕತೆಯಂತಹ ಹಲವಾರು ಶಾರೀರಿಕ ಸೂಚಕಗಳನ್ನು ಅಳೆಯುತ್ತದೆ ಹಾಗೂ ದಾಖಲಿಸುತ್ತದೆ. ಒಬ್ಬ ವ್ಯಕ್ತಿಯನ್ನು ಪ್ರಶ್ನೆಗಳನ್ನು ಕೇಳಿದಾಗ ಮತ್ತು ಹಲವಾರು ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡುವ ಮಾರ್ಗವಾಗಿದೆ.ಮಹಾದೇವಪ್ಪ ಹರಿಜನ ಗೌಡರ ಜಮೀನಿನಲ್ಲಿ ದುಡಿಯುತ್ತಿದ್ದರು. 2025 ಮೇ 31 ರಂದು ಅವರ ಹೊಲಕ್ಕೆ ಹೋಗಿದ್ದವರು ವಾಪಸ್ ಬಂದಿರಲಿಲ್ಲ. ನಾವು ಹೋಗಿ ಕೇಳಿದಾಗ ಮಹಾದೇವಪ್ಪ ತಮ್ಮ ಬಳಿಗೆ ಕೆಲಸಕ್ಕೆ ಬಂದೇ ಇಲ್ಲವೆಂದು ಅಪ್ಪುಗೌಡ ಗಂಗರೆಡ್ಡಿ ಹಾಗೂ ಅವನ ತಂದೆ-ತಾಯಿ ನಮಗೆ ದಿಕ್ಕು ತಪ್ಪಿಸಿದ್ದರು. ಜೂನ್ 3ರಂದು ಮೃತದೇಹ ಸಿಕ್ಕಮೇಲೆ ನಾವು ದೂರು ನೀಡಿದ ಆರು ತಿಂಗಳ ಬಳಿಕ ಪೊಲೀಸರು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುನೀಲ ಹರಿಜನ, ಕೊಲೆಯಾದವನ ಸಂಬಂಧಿ.ಜೂನ್ 3ರಂದು ಬನ್ನೆಟ್ಟಿ.ಪಿ.ಎ ಗ್ರಾಮದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿರುತ್ತದೆ. ಶಂಕಾಸ್ಪದವಾಗಿದ್ದರಿಂದ ಸುದೀರ್ಘ ತನಿಖೆ ನಡೆಸಿದಾಗ ಕೊಲೆ ಮಾಡಿ, ಸಾಕ್ಷಿ ನಾಶ ಮಾಡಿರುವುದು ತಿಳಿದುಬಂದಿದೆ. ಈ ಕೊಲೆಯ ಬಳಿಕ ಪೊಲೀಸರು ಹಾಗೂ ಯಾರಿಗೂ ಶಂಕೆ ಬಾರದಂತೆ ಹೇಗೆ ಇರಬೇಕೆಂದು ಅಪ್ಪುಗೌಡ ತನ್ನ ತಂದೆ-ತಾಯಿಗೆ ತಿಳಿಸಿಕೊಟ್ಟಿದ್ದನು. ಬ್ರೈನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫಿ ಮತ್ತು ಸಾಕ್ಷಾಧಾರಗಳ ಸಹಾಯದಿಂದ ತನಿಖೆ ನಡೆಸಿ ಕೊಲೆ ಮಾಡಿದ ಅಪ್ಪುಗೌಡ ಗಂಗರೆಡ್ಡಿ ಹಾಗೂ ಕೊಲೆಗೆ ಸಹಕರಿಸಿದ ಮಲ್ಲಮ್ಮ ಆಕೆಯ ಪತಿ ಸಿದ್ದನಗೌಡನನ್ನು ಬಂಧಿಸಲಾಗಿದೆ.ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ