ಶಿಗ್ಗಾಂವಿ: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಲಿಯೋ ಲಸಿಕೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಬೇಕು ಎಂದು ಸರ್ಕಾರಿ ಪ್ರೌಢ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮೈಲಾರಪ್ಪ ಮಮದಾಪುರ ಹೇಳಿದರು.
ಉಪನ್ಯಾಸಕರಾದ ಶಿವಾನಂದ ದೊಡ್ಡಮನಿ ಅವರು ಮಾತನಾಡಿ, ದೇಶವನ್ನು ಪೋಲಿಯೋ ಮುಕ್ತವಾಗಿಸಲು ಸರ್ಕಾರ ಹಲವು ವರ್ಷಗಳಿಂದ ಪರಿಣಾಮಕಾರಿ ಲಸಿಕಾ ಅಭಿಯಾನಗಳನ್ನು ನಡೆಸುತ್ತಿದೆ. ಮಕ್ಕಳ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪಾಲಕರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರೋಗ್ಯವಂತ ಮಕ್ಕಳಿಂದಲೇ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಸವಿತಾ ವಾಲಿ, ಕುನ್ನೂರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಮೌಲಾಸಾಬ ಜಿಗಳೂರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮರೆವ್ವಾ ಮಮದಾಪುರ, ಅಂಗನವಾಡಿ ಕಾರ್ಯಕರ್ತೆ ತುಳಸಾ ಚಿತ್ರಗಾರ, ಕುನ್ನೂರ ಪ್ಲಾಟ್ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕಮಲವ್ವ ಮಾಳೊಜನವರ, ಆಶಾ ಕಾರ್ಯಕರ್ತೆ ಶ್ರೀದೇವಿ ಬಡಿಗೇರ, ಅಂಗನವಾಡಿ ಸಹಾಯಕಿ ನಯನಾ ಭದ್ರಾಪುರ, ಗ್ರಾಮಸ್ತರಾದ ಯಲ್ಲಪ್ಪ ಬಾರ್ಕಿ, ಸಂತೋಷ ಬೀರವಳ್ಳಿ ಸೇರಿದಂತೆ ಹಲವು ಪಾಲಕರು ಉಪಸ್ಥಿತರಿದ್ದರು.ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕೇಂದ್ರದ ಸಿಬ್ಬಂದಿ, ಮಕ್ಕಳಿಗೆ ಪೋಲಿಯೋ ಕಾರ್ಯವನ್ನು ವ್ಯವಸ್ಥಿತವಾಗಿ ನೆರವೇರಿಸಿದ್ದು, ಗ್ರಾಮದ ಪಾಲಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ಬಾಕಿ ಉಳಿದ ಮಕ್ಕಳಿಗೆ ಆಶಾ, ಅಂಗನವಾಡಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ ಎಂದು ಕುನ್ನೂರ ಸಮುದಾಯ ಆರೋಗ್ಯ ಅಧಿಕಾರಿ ಸವಿತಾ ವಾಲಿ ಹೇಳಿದರು.