ಕಸ್ತೂರಿರಂಗನ್‌ ಹೆಸರಲ್ಲಿ ರಾಜಕೀಯ ನಾಟಕ ಸಲ್ಲ: ತೀ.ನಾ.ಶ್ರೀನಿವಾಸ್

KannadaprabhaNewsNetwork |  
Published : Sep 22, 2026, 01:30 AM IST
ಪೋಟೊ: 21ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ. ನಾ. ಶ್ರೀನಿವಾಸ್ ಮಾತನಾಡಿದರು.  | Kannada Prabha

ಸಾರಾಂಶ

ಕಸ್ತೂರಿರಂಗನ್‌ ವರದಿಯನ್ನು ರಾಜಕೀಯ ಆರೋಪ–ಪ್ರತ್ಯಾರೋಪಗಳಿಗೆ ಬಳಸುವ ಬದಲು ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಸ್ತೂರಿರಂಗನ್‌ ವರದಿಯನ್ನು ರಾಜಕೀಯ ಆರೋಪ–ಪ್ರತ್ಯಾರೋಪಗಳಿಗೆ ಬಳಸುವ ಬದಲು ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಮಲೆನಾಡು ರೈತರ ಭೂಹಕ್ಕು, ಮುಳುಗಡೆ ಸಂತ್ರಸ್ತರು, ಅರಣ್ಯ ಭೂಮಿ, ಹಕ್ಕುಪತ್ರ ಹಾಗೂ ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಕಾಲಮಿತಿ ನಿಗದಿಪಡಿಸಿ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

‘ಮಲೆನಾಡು ರೈತರ ಸಮಸ್ಯೆಗಳ ಬಗ್ಗೆ ಇದುವರೆಗೆ ಪರಿಣಾಮಕಾರಿಯಾಗಿ ಧ್ವನಿ ಎತ್ತದ ಶಾಸಕರು ಹಾಗೂ ಸಂಸದರು ಇದೀಗ ತಮ್ಮ ರಾಜಕೀಯ ಮುಖ ಉಳಿಸಿಕೊಳ್ಳಲು ಪಾದಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ರಾಜಕೀಯ ನಾಟಕದಂತಿದೆ’ ಎಂದು ಆರೋಪಿಸಿದರು.

‘2022ರಲ್ಲಿ ಮಲೆನಾಡು ರೈತರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಸಲ್ಲಿಸಿದ್ದ 200 ಪುಟಗಳ ವರದಿಯನ್ನು ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್‌ ಅವರು ಸ್ವೀಕರಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಲಾಗಿತ್ತು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಪ್ರಮುಖ ಸಮಸ್ಯೆಗಳು ಬಗೆಹರಿದಿಲ್ಲ’ ಎಂದು ದೂರಿದರು.

‘ಅಧಿವೇಶನದಲ್ಲಿ ಕಸ್ತೂರಿರಂಗನ್‌ ವರದಿ ಜತೆಗೆ ಮುಳುಗಡೆ ಸಂತ್ರಸ್ತರು, ಅರಣ್ಯ ಭೂಮಿ, ಹಕ್ಕುಪತ್ರ ಹಾಗೂ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಬೇಕು. ಅಗತ್ಯವಿದ್ದಲ್ಲಿ ಸರ್ಕಾರಿ ಆದೇಶ ಹಾಗೂ ಕಾನೂನು ರೂಪಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. 2022ರ ಅಧ್ಯಯನ ವರದಿಯ ಶಿಫಾರಸುಗಳ ಅನುಷ್ಠಾನಕ್ಕೂ ಕಾಲಮಿತಿಯ ಕಾರ್ಯಕ್ರಮ ರೂಪಿಸಬೇಕು’ ಎಂದು ಒತ್ತಾಯಿಸಿದರು.2022ರ ವರದಿ ಏನಾಯಿತು?: ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರು 2022ರಲ್ಲಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ ರಚಿಸಿದ್ದರು. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಒಂಬತ್ತು ಮಂದಿಯನ್ನು ಸಮಿತಿಗೆ ನೇಮಿಸಲಾಗಿತ್ತು. ನಾನೂ ಸಮಿತಿಯ ಸದಸ್ಯನಾಗಿದ್ದೆ’ ಎಂದರು.

‘2022ರ ನವೆಂಬರ್‌ 28ರಂದು ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಮಲೆನಾಡು ಜನಾಕ್ರೋಶ’ ಹೆಸರಿನಲ್ಲಿ ಪಾದಯಾತ್ರೆ ನಡೆಸಲಾಗಿತ್ತು. ಬಳಿಕ ನಡೆದ ರೈತ ಸಮಾವೇಶದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಸುಮಾರು 10 ಸಾವಿರ ಜನರ ಸಮ್ಮುಖದಲ್ಲಿ ಅಧ್ಯಯನ ಸಮಿತಿಯ 200 ಪುಟಗಳ ವರದಿಯನ್ನು ಸ್ವೀಕರಿಸಿದ್ದರು. ಬಳಿಕ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೂ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.ಶರಾವತಿ ಸಂತ್ರಸ್ತರ ಸಮಸ್ಯೆ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೂ ಸಮಗ್ರ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವುದನ್ನು ಹೊರತುಪಡಿಸಿದರೆ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮಗಳು ನಡೆದಿಲ್ಲ ಎಂದು ಶ್ರೀನಿವಾಸ್ ದೂರಿದರು.

ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು 50 ಸಾವಿರ ರೈತರ ಹಕ್ಕುಪತ್ರ ಅರ್ಜಿಗಳು ತಿರಸ್ಕೃತವಾಗಿವೆ ಹಾಗೂ ರೈತರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ವಿಚಾರದಲ್ಲಿಯೂ ಜನಪ್ರತಿನಿಧಿಗಳು ಪರಿಣಾಮಕಾರಿಯಾಗಿ ಧ್ವನಿ ಎತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಭೂಹಕ್ಕು ಸೇರಿದಂತೆ ರೈತರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಕಲ್ಪಿಸಿಲ್ಲ ಎಂದು ದೂರಿದರು.

ತೀರ್ಥಹಳ್ಳಿ ಕಾರ್ಯಕ್ರಮಕ್ಕೆ ಆಕ್ಷೇಪ: ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿರುವುದು ಸ್ವಾಗತಾರ್ಹ. ಆದರೆ, ತೀರ್ಥಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲೆನಾಡು ರೈತರ ಸಮಸ್ಯೆಗಳನ್ನು ಸಮರ್ಪಕವಾಗಿ ಆಲಿಸಲು ಅವಕಾಶ ಕಲ್ಪಿಸಲಿಲ್ಲ. ರೈತರ ಪರ ನಿರಂತರವಾಗಿ ಹೋರಾಟ ನಡೆಸುತ್ತಿರುವ ಪ್ರತಿನಿಧಿಗಳನ್ನು ಆಹ್ವಾನಿಸದಿರುವುದು ಬೇಸರದ ಸಂಗತಿ ಎಂದು ತೀ.ನಾ.ಶ್ರೀನಿವಾಸ್ ಆರೋಪಿಸಿದರು.ಕಸ್ತೂರಿರಂಗನ್‌ ವರದಿ ಕುರಿತು ನಡೆದ ಸಂವಾದದಲ್ಲಿಯೂ ಜಿಲ್ಲೆಯ ಶಾಸಕರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ಸಿಗದಿರುವುದು ಗಮನಾರ್ಹ. ಮೂರು ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ಕಸ್ತೂರಿರಂಗನ್‌ ವರದಿ ಹಾಗೂ ಮಲೆನಾಡು ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಈ ಭರವಸೆ ಕಾರ್ಯರೂಪಕ್ಕೆ ಬರಬೇಕು. ರಾಜಕೀಯ ಪಕ್ಷಗಳು ಪರಸ್ಪರ ಆರೋಪ–ಪ್ರತ್ಯಾರೋಪ ಮಾಡುವುದಕ್ಕಿಂತ ಮಲೆನಾಡಿನ ರೈತರ ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಒಗ್ಗಟ್ಟಿನಿಂದ ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸುವುದು ಸರ್ಕಾರದ ಆದ್ಯತೆಯಾಗಬೇಕು’ ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡ್ಡಾಯ..ವೈಜ್ಞಾನಿಕ ಪ್ರಸ್ತಾವನೆ ಸಲ್ಲಿಕೆಯಲ್ಲಿ ರಾಜ್ಯ ಹಿಂದೆ: ಡಾ.ಧನಂಜಯ ಸರ್ಜಿ
ನವೀನ ಮಾದರಿಯ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ: ಡಾ. ತುಷಾರ್ ಕಾಂತಿ ಬೆಹರಾ