ರಾಜಕೀಯ ‘ಕೈ ಚಳಕ’: ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ರದ್ದಾದ ಎಚ್‌ಡಿಕೆ ಕಾರ್ಯಕ್ರಮ

KannadaprabhaNewsNetwork |  
Published : Nov 15, 2026, 01:30 AM IST
14ಕೆಎಂಎನ್‌ಡಿ-6ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಟೀಂ ಹೆಚ್‌ಡಿಕೆ ಯುವಕರಿಂದ ಉತ್ಕೃಷ್ಟ ಗುಣಮಟ್ಟದ ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಕಾರ್ಯಕ್ರಮ ರದ್ದಾಗಲು ಮಂಡ್ಯ ಶಾಸಕರೇ ಕಾರಣ. ಕಾಲೇಜು ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿ ಕಾರ್ಯಕ್ರಮ ರದ್ದಾಗುವಂತೆ ನೋಡಿಕೊಂಡಿದ್ದಾರೆ. ಇಂತಹ ಪ್ರವೃತ್ತಿ ತಪ್ಪು. ಮಕ್ಕಳಿಗೆ ಒಳ್ಳೆಯದಾಗುವ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸುವುದು ಎಷ್ಟು ಸರಿ.

- ಸ್ಥಳೀಯ ಶಾಸಕರ ‘ಕೈವಾಡ’ದಿಂದ ಕಾರ್ಯಕ್ರಮ ರದ್ದು; ಜೆಡಿಎಸ್ ಆಕ್ರೋಶ

- ವಿದ್ಯಾರ್ಥಿನಿಯರಿಗೆ ಮಕ್ಕಳ ದಿನಾಚರಣೆ, ರಾಜ್ಯೋತ್ಸವ ಕೊಡುಗೆ ತಲುಪಿಸಿದ ಸಚಿವರು

- ‘ಟೀಂ ಎಚ್ಡಿಕೆ’ ಯುವಕರಿಂದ ವಿದ್ಯಾರ್ಥಿನಿಯರಿಗೆ ನೀರಿನ ಬಾಟಲ್ ವಿತರಣೆಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸಚಿವರು ಹಾಗೂ ಮಂಡ್ಯ ಲೋಕಸಭಾ ಸದಸ್ಯರು ಆಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ‘ಟೀಂ ಎಚ್‌ಡಿಕೆ’ ಯುವಕರು ಇಲ್ಲಿನ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ನೀರಿನ ಬಾಟಲ್ ವಿತರಿಸಿದರು.

ಸಚಿವರ ನಿಗದಿತ ಕಾರ್ಯಕ್ರಮ ಪಟ್ಟಿಯ ಪ್ರಕಾರ ಶನಿವಾರ (ನವೆಂಬರ್ 14) ಕಾಲೇಜಿನಲ್ಲಿ ನಡೆಯಲಿದ್ದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳಬೇಕಿತ್ತು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರು ಅಧಿಕೃತವಾಗಿ ಸಚಿವರನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಸಚಿವರು ಕೂಡ ಅವರಿಗೆ ತಿಳಿಸಿದ್ದರು.

ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿರುವ ಕಾಲೇಜು ಕಾರ್ಯಕ್ರಮಕ್ಕೆ ಬರಿಗೈನಲ್ಲಿ ತೆರಳಬಾರದು ಎಂದು ತೀರ್ಮಾನಿಸಿದ್ದ ಸಚಿವರು, ವಿದ್ಯಾರ್ಥಿನಿಯರಿಗೆ ಉತ್ಕೃಷ್ಟ ಗುಣಮಟ್ಟದ ಕುಡಿಯುವ ನೀರಿನ ಬಾಟಲಿಯನ್ನು ವಿಶೇಷ ಕೊಡುಗೆಯಾಗಿ ನೀಡಬೇಕು ಎಂದು ಭಾವಿಸಿ ಅದರಂತೆ ನೀರಿನ ಬಾಟಲಿಗಳನ್ನು ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿಸಿ ತರಿಸಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ರಾಜಕೀಯ ಹಿತಾಸಕ್ತಿಗಳು ತಮ್ಮ ಕೈಚಳಕ ತೋರಿಸಿ ಕಾರ್ಯಕ್ರಮ ನಡೆಸಬಾರದು ಎಂದು ಕಾಲೇಜಿನ ಪ್ರಾಂಶುಪಾಲರ ಮೇಲೆ ಒತ್ತಡ ಹೇರಿವೆ. ಈ ಒತ್ತಡ ಮತ್ತು ‘ರಾಜಕೀಯ ಕೈ ಚಳಕ’ದ ಮುಲಾಜಿಗೆ ಮಣಿದ ಪ್ರಾಂಶುಪಾಲರು ಸಚಿವರ ಆಪ್ತರಿಗೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದಕ್ಕೆ ಶೈಕ್ಷಣಿಕ ಚಟುವಟಿಕೆಗಳ ನೆಪ ಹೇಳಿದ ಪ್ರಾಂಶುಪಾಲರು, ರಾಜಕೀಯ ಒತ್ತಡದ ವಿಷಯವನ್ನು ಮರೆ ಮಾಚಲು ಯತ್ನಿಸಿದರು.

ವಿಷಯ ತಿಳಿದು ಅತೀವ ಬೇಸರ ಮಾಡಿಕೊಂಡ ಸಚಿವರು, ಕಾರ್ಯಕ್ರಮ ರದ್ದಾದರೇನಂತೆ, ನೀರಿನ ಬಾಟಲಿಗಳನ್ನು ವಿದ್ಯಾರ್ಥಿನಿಯರಿಗೆ ತಲುಪಿಸಿ. ಅವರೆಲ್ಲರಿಗೂ ಶುಭಾಶಯ ತಿಳಿಸಿ ಎಂದು ತಮ್ಮ ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದರು.

ಅದರಂತೆ ಶನಿವಾರ ಬೆಳಗ್ಗೆ ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ನೇತೃತ್ವದಲ್ಲಿ ಕಾಲೇಜಿಗೆ ತೆರಳಿದ ‘ಟೀಂ ಎಚ್ಡಿಕೆ’ ತಂಡದ ಯುವಕರು ಎಲ್ಲಾ ವಿದ್ಯಾರ್ಥಿನಿಯರಿಗೆ ನೀರಿನ ಬಾಟಲಿಗಳನ್ನು ವಿತರಿಸಿದರು.

ರಾಜಕೀಯ ಒತ್ತಡದ ವಿರುದ್ಧ ಜೆಡಿಎಸ್ ಕಿಡಿ:

ಕೇಂದ್ರ ಸಚಿವರ ಕಾರ್ಯಕ್ರಮ ರದ್ದಾಗುವಂತೆ ‘ಕೈಚಳಕ’ ತೋರಿದ ರಾಜಕೀಯ ಹಿತಾಸಕ್ತಿಯ ವಿರುದ್ಧ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೀರಿನ ಬಾಟಲ್ ವಿತರಣೆ ಕಾರ್ಯಕ್ರಮ ಇದಾಗಿತ್ತು. ವಿದ್ಯಾರ್ಥಿಗಳಿಗೆ ನೀರಿನ ಬಾಟಲ್ ವಿತರಣೆ ಮಾಡಲು ಆಗಮಿಸಬೇಕಿದ್ದ ಕೇಂದ್ರ ಸಚಿವರು ಬಾರದಂತೆ ಕೆಲವರು ತಡೆದಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಏಕಾಏಕಿ ಕಾರ್ಯಕ್ರಮ ರದ್ದುಗೊಳಿಸಿರುವ ಕಾಲೇಜು ಮುಖ್ಯಸ್ಥರ ಕ್ರಮ ಸರಿ ಇಲ್ಲ. ಇಂತಹ ಷಡ್ಯಂತ್ರದ ವಿರುದ್ಧ ನಮ್ಮ ಆಕ್ರೋಶವಿದೆ ಎಂದರು.

ಈ ಕಾರ್ಯಕ್ರಮ ರದ್ದಾಗಲು ಮಂಡ್ಯ ಶಾಸಕರೇ ಕಾರಣ. ಕಾಲೇಜು ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿ ಕಾರ್ಯಕ್ರಮ ರದ್ದಾಗುವಂತೆ ನೋಡಿಕೊಂಡಿದ್ದಾರೆ. ಇಂತಹ ಪ್ರವೃತ್ತಿ ತಪ್ಪು. ಮಕ್ಕಳಿಗೆ ಒಳ್ಳೆಯದಾಗುವ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜನರ ಭಾವನೆಗಳನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು. ಎಲ್ಲದರಲ್ಲೂ ಕಲ್ಲು ಹುಡುಕುವ ಕೆಲಸ ಮಾಡಬಾರದು. ವಿದ್ಯಾರ್ಥಿಗಳಿಗೆ ಒಳ್ಳೆಯದಾಗಬೇಕಾದರೆ ಅವರು ಸಹಕಾರ ನೀಡಬೇಕು. ಎಲ್ಲಾ ವಿಷಯಗಳಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಒಳ್ಳೆಯ ರೀತಿಯಲ್ಲಿ ರಾಜಕಾರಣ ಮಾಡೋಣ ಎಂದು ಚಂದನ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಅಭಿವೃದ್ಧಿಗೆ ಯುವಶಕ್ತಿ ಆಧಾರಸ್ತಂಭ: ಕಾಳೇಗೌಡ
ಶಾಸಕ ಪೊನ್ನಣ್ಣ, ಅಶೋಕ್ ಪೂವಯ್ಯಗೆ ಸನ್ಮಾನ