ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರತಿಮೆ ಅನಾವರಣಕ್ಕೆ ಅನುಮತಿ ನಿರಾಕರಿಸಲಾಗಿದೆ. ಸ್ಥಳೀಯ ಜನರು ಶಾಂತತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮನವಿ ಮಾಡಿದ್ದಾರೆ. ಈ ನಡುವೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಅನಗೋಳದ ಜನರೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಪ್ರತಿಮೆ ಅನಾವರಣಕ್ಕೆ ಶನಿವಾರ ಮಧ್ಯಾಹ್ನ ಮನವಿ ಕೂಡ ಸಲ್ಲಿಸಿದ್ದರು. ಈ ನಡುವೆ ಪ್ರತಿಮೆ ಅನಾವರಣಕ್ಕೆ ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದ್ದು, ಸ್ಪಷ್ಟ ಕಾರಣಗಳೇನು ಎಂದು ತಿಳಿದುಬಂದಿಲ್ಲ. ಹೀಗಾಗಿ ಭಾನುವಾರ ಪ್ರತಿಮೆ ಅನಾವರಣ ಮತ್ತೊಂದು ರಾಜಕೀಯ ಮಜಲು ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಆರೋಪ, ಪ್ರತ್ಯಾರೋಪ:ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರತಿಮೆ ಅನಾವರಣ ಕಾರ್ಯಕ್ರಮ ಮುಂದೂಡಬೇಕೆಂದು ಕೆಲವರು ಆಗ್ರಹಿಸಿದರೆ, ಮತ್ತೆ ಕೆಲವರು ಕಾಮಗಾರಿ ಪೂರ್ಣಗೊಂಡಿದ್ದು ಪ್ರತಿಮೆ ಅನಾವರಣಕ್ಕೆ ಅನುಮತಿ ನೀಡುವಂತೆ ಎಂದು ಬೇಡಿಕೆ ಇಟ್ಟಿದ್ದಾರೆ. ಸಂಭಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ, ಆರೋಪ, ಪ್ರತ್ಯಾರೋಪ ಕೇಳಿಬರುತ್ತಿವೆ. ಈ ನಡುವೆ ಶನಿವಾರ ಮೇಯರ್ ಸವಿತಾ ಕಾಂಬಳೆ ಮತ್ತು ಉಪಮೇಯರ್ ಆನಂದ ಚವ್ಹಾಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಸವಿತಾ ಕಾಂಬಳೆ ಅವರು, ಪಾಲಿಕೆ ವತಿಯಿಂದ ₹40 ಲಕ್ಷ ವೆಚ್ಚದಲ್ಲಿ ಅನಗೋಳದ ವೃತ್ತದಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ಎಲ್ಲ ಕಾಮಗಾರಿ ಪೂರ್ಣಗೊಂಡಿವೆ. ಶಿಷ್ಟಾಚಾರ ನಿಯಮದನ್ವಯವೇ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ, ಕೆಲವರು ಕಾಮಗಾರಿ ಪೂರ್ಣಗೊಂಡಿಲ್ಲವೆಂದು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಭೇಟಿ ಮಾಡಿದ ಶಾಸಕ ಅಭಯ:
ಅನಗೋಳದ ವೃತ್ತದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿರುವ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಜಿಲ್ಲಾಡಳಿತ ಅನುಮತಿ ನೀಡುವಂತೆ ಆಗ್ರಹಿಸಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು.ಈ ವೇಳೆ ಶಾಸಕ ಅಭಯ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ವಿನಾಕಾರಣ ಪ್ರತಿಮೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿಯಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ನಿರ್ಣಯ ಅಂಗೀಕರಿಸಲಾಗಿದೆ. ಸ್ಥಳೀಯ ಜನರಿಂದ ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆಯೂ ಕೇಳಲಾಗಿತ್ತು. ಆದರೆ, ಒಂದೂ ಆಕ್ಷೇಪಣೆ ಬಂದಿಲ್ಲ. ಪೊಲೀಸ್ ಇಲಾಖೆ ಕೂಡ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಜ.5ರಂದು ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಗೊಳಿಸಲಾಗಿದೆ. ಆದರೆ, ಕೆಲವರು ವಿನಾಕಾರಣ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಭಾಜಿರಾಜೇ ಮಹಾರಾಜರ ಪ್ರತಿಮೆ ಉದ್ಘಾಟನೆ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಶಿವಾಜಿ ಮಹಾರಾಜ, ಸಂಭಾಜಿರಾಜೇ ಮಹಾರಾಜರ ಭಾವಚಿತ್ರ ಹೊಂದಿದ ಪೋಸ್ಟರ್ ತೆರವುಗೊಳಿಸಲಾಗಿದೆ. ಕಾಂಗ್ರೆಸ್ ಅಧಿವೇಶನದ ವೇಳೆ ಪಾಲಿಕೆಯಿಂದ ಅನುಮತಿ ಪಡೆಯದೇ ಕಾಂಗ್ರೆಸ್ ನಾಯಕರ ಭಾವಚಿತ್ರದ ಪೋಸ್ಟರ್ ಹಾಕಲಾಗಿತ್ತು. ಅವುಗಳನ್ನು ತೆರವುಗೊಳಿಸಿಲ್ಲ. ಹಿಂದು ಮಹಾಪುರುಷರ ಭಾವಚಿತ್ರದ ಪೋಸ್ಟರ್ ಹಚ್ಚಬಾರದೇಕೆ? ನಮಗೆ ಒಂದು ಕಾನೂನು ಬೇರೆಯವರಿಗೆ ಮತ್ತೊಂದು ಕಾನೂನು ಏಕೆ ಎಂದು ಪ್ರಶ್ನಿಸಿದರು. ಉಪಮೇಯರ್ ಆನಂದ ಚವ್ಹಾಣ ಇತರರು ಉಪಸ್ಥಿತರಿದ್ದರು.ಸಂಭಾಜಿರಾಜೇ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ, ಸೌಹಾರ್ದತೆ, ಸಹಕಾರದಿಂದ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಸಂಭಾಜಿರಾಜೇ ಮಹಾರಾಜರ ಘನತೆಗೆ ಧಕ್ಕೆಯಾಗದಂತೆ ನೋಡುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಪಾಲಿಕೆ ಮತ್ತು ನಿರ್ಮಿತಿ ಕೇಂದ್ರದ ಗುತ್ತಿಗೆದಾರರ ಜೊತೆಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದ್ದರು. ಆದರೆ ರಾತ್ರಿ ವೇಳೆ ಅನುಮತಿಯನ್ನು ನಿರಾಕರಿಸಿದ್ದಾರೆ.
ಪ್ರತಿಮೆ ಅನಾವರಣಕ್ಕೆ ವಿರೋಧ ಸಲ್ಲದು: ಸಿ.ಟಿ.ರವಿಅನಗೋಳದ ಪ್ರಮುಖ ವೃತ್ತದಲ್ಲಿ ಛತ್ರಪತಿ ಸಂಭಾಜಿರಾಜೇ ಮಹಾರಾಜರ ಪ್ರತಿಮೆ ಅನಾವರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಅವರು, ಮಹಾಪುರುಷರನ್ನು ಪ್ರಾದೇಶಿಕ ದೃಷ್ಟಿಯಿಂದ ನೋಡದೆ ಅವರ ರಾಷ್ಟ್ರೀಯ ವ್ಯಕ್ತಿತ್ವ ಗೌರವಿಸಬೇಕು. ಸನಾತನ ಧರ್ಮದ ಉಳಿವಿಗಾಗಿ ಛತ್ರಪತಿ ಶಿವಾಜಿ ಮಹಾರಾಜರು ಹೋರಾಟ, ಹಿಂದವಿ ಸ್ವರಾಜದ ಸ್ಥಾಪನೆ ಮರೆಯಬಾರದು. ಜೀವಕ್ಕಿಂತ ಧರ್ಮಶ್ರೇಷ್ಠವೆಂದು ಧರ್ಮಕ್ಕಾಗಿ ಪ್ರಾಣ ಪಣಕ್ಕಿಟ್ಟ ಸಂಭಾಜಿರಾಜೇ ಮಹಾರಾಜರ ಪ್ರತಿಮೆ ಅನಾವರಣಕ್ಕೆ ವಿರೋಧ ಮಾಡಬಾರದು ಎಂದು ಮನವಿ ಮಾಡಿದ್ದಾರೆ.