ರಾಜಕೀಯವಾಗಿ ರಾಮ ಕ್ಷತ್ರಿಯ ಸಮುದಾಯ ಬೆಳೆಯಬೇಕು: ಬಾಲಚಂದ್ರ

KannadaprabhaNewsNetwork | Published : Mar 11, 2025 12:45 AM

ಸಾರಾಂಶ

ರಾಮಕ್ಷತ್ರಿಯ ಸೇವಾ ಸಂಘ ಪುತ್ತೂರು ಹಾಗೂ ರಾಮ ಕ್ಷತ್ರಿಯ ಯುವ ಸಂಘದ ಆಶ್ರಯದಲ್ಲಿ ದಿ.ಗಣೇಶ್ ಮರೀಲ್ ಸ್ಮರಣಾರ್ಥ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಹ್ವಾನಿತ ೫ ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ನೆರವೇರಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಕ್ರೀಡೆ ಬದುಕಿಗೆ ಪೂರಕವಾದ ಪ್ರಕ್ರಿಯೆ. ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹಾಗೂ ಆರೋಗ್ಯ ವೃದ್ಧಿ ಮಾಡಿಕೊಡುವ ಕ್ರೀಡೆಯ ಜತೆಗೆ ರಾಜಕೀಯವಾಗಿಯೂ ರಾಮಕ್ಷತ್ರೀಯ ಸಮುದಾಯ ಬೆಳೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು ಹೆಚ್ಚಾಗಬೇಕು ಎಂದು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಅಭಿಪ್ರಾಯಪಟ್ಟಿದ್ದಾರೆ.

ರಾಮಕ್ಷತ್ರಿಯ ಸೇವಾ ಸಂಘ ಪುತ್ತೂರು ಹಾಗೂ ರಾಮ ಕ್ಷತ್ರಿಯ ಯುವ ಸಂಘದ ಆಶ್ರಯದಲ್ಲಿ ದಿ.ಗಣೇಶ್ ಮರೀಲ್ ಸ್ಮರಣಾರ್ಥ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಯೋಜನೆಗೊಂಡಿದ್ದ ಆಹ್ವಾನಿತ ೫ ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕೀಯದಲ್ಲಿ ಉತ್ತಮ ಕೆಲಸ ಮಾಡಿದ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ನಮ್ಮ ಸಮುದಾಯದ ಯುವಕರು ಬೆಳೆಯಬೇಕು. ಸಮುದಾಯದ ಸಂಘಟನೆಯತ್ತಲೂ ದೃಷ್ಟಿ ಹರಿಸಬೇಕು. ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಿಂತನೆಗಳನ್ನು ಬೆಳೆಸಿಕೊಂಡಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ರಾಮ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆಮ್ಮಿಂಜೆ ಮಾತನಾಡಿ, ನಮ್ಮ ಸಮುದಾಯ ಸಂಘಟನಾತ್ಮಕವಾಗಿ ಹೆಚ್ಚು ಬಲಿಷ್ಠವಾಗಿಲ್ಲ. ನಮ್ಮ ಯುವಕರು ಕೇವಲ ಆಟವಾಡಿದರೆ ಸಾಲದು. ಉದ್ಯೋಗವನ್ನೂ ಪಡೆದುಕೊಳ್ಳಲು ಪ್ರಯತ್ನಿಸಬೇಕು. ಮೊದಲು ಬದುಕಿನ ಭದ್ರತೆ ಮುಖ್ಯ. ಆ ಬಳಿಕ ಆಟೋಟಗಳು ಎನ್ನುವುದು ಯುವಕರಿಗೆ ಅರ್ಥವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಯುವಕರು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಕಿವಿ ಮಾತು ಹೇಳಿದರು.

ಮಾಜಿ ಸೈನಿಕ ಸುಬ್ರಹ್ಮಣ್ಯ ಕೆಮ್ಮಿಂಜೆ ಉದ್ಘಾಟಿಸಿದರು. ಯುವ ಸಂಘದ ಅಧ್ಯಕ್ಷ ಅನೀಶ್ ಕುಮಾರ್ ಮರೀಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಮಿತಾ ಗಣೇಶ್, ಕಾರ್ಯಕಾರಿ ಸಮಿತಿಯ ನವನೀತ್ ಹಾಗೂ ಉಮೇಶ್ ಇದ್ದರು.

ಯುವ ಸಂಘದ ಉಪಾಧ್ಯಕ್ಷ ಜಿತೇಂದ್ರ ಸ್ವಾಗತಿಸಿದರು. ಬಾಲಚಂದ್ರ ಮೊಟ್ಟೆತ್ತಡ್ಕ ವಂದಿಸಿದರು.

Share this article