ರಾಜಕಾರಣಿಗಳು ರೈತರಿಗೆ ನ್ಯಾಯ ಕೊಡಿಸಲು ವಿಫಲ: ಕರ್ನಾಟಕ ಜಾಗ್ರತಿ ಸಮಿತಿ ಮುಖ್ಯಸ್ಥ ಡಾ.ವಾಸು

KannadaprabhaNewsNetwork |  
Published : Feb 19, 2025, 12:49 AM IST
18ಕೆಎಂಎನ್ ಡಿ19 | Kannada Prabha

ಸಾರಾಂಶ

ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅಮೆರಿಕಾಗೆ ತೆರಳಿರುವ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುಣ್ಯಸ್ಮರಣೆ ಕಾರ್‍ಯಕ್ರಮಕ್ಕೆ ಗೈರಾಗಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಜ್ಯಕ್ಕೆ 2018ರ ಕಾವೇರಿ ಅಂತಿಮ ತೀರ್ಪು ಲಾಭದಾಯಕವಾಗಿದ್ದರೂ ಜಿಲ್ಲೆಯ ರಾಜಕಾರಣಿಗಳು ಸದ್ಬಳಿಕೆ ಮಾಡಿಕೊಂಡು ರೈತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ಜಾಗ್ರತಿ ಸಮಿತಿ ಮುಖ್ಯಸ್ಥ ಡಾ.ವಾಸು ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಕ್ಯಾತನಹಳ್ಳಿ ಸ್ವಾಮಿ ವಿವೇಕಾನಂದ ಮಂದಿರದಲ್ಲಿ ನಡೆದ ಕೆ.ಎಸ್.ಪುಟ್ಟಣ್ಣಯ್ಯರವರ 7ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ರಾಜ್ಯದ ಕೆರೆಕಟ್ಟೆಗಳ ಹೂಳು ತೆಗೆಸುವುದಕ್ಕೂ ತಮಿಳುನಾಡು ಸರಕಾರ ಕಿರಿಕಿರಿಯುಂಟು ಮಾಡುತ್ತಿತ್ತು. ಇದೀಗ ಸುಪ್ರೀಂಕೋರ್ಟ್ ತೀರ್ಪುನಿಂದ ರಾಜ್ಯಕ್ಕೆ 284 ಟಿಎಂಸಿ ನೀರು ಲಭಿಸಿದೆ. ಜಿಲ್ಲೆಯ ರಾಜಕಾರಣಿಗಳು ರೈತರಿಗೆ ಸರಿಯಾಗಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯ ರಾಜಕಾರಣಿಗಳು ರೈತ ಪರ ಕಾಳಜಿ ಇಲ್ಲದ ಪರಿಣಾಮ ಕಾಲುವೆಗಳು ಅಧ್ವಾನಗೊಂಡಿವೆ. ಜಿಲ್ಲೆಯ ಕೊನೆಭಾಗದ ಮದ್ದೂರು, ಮಳವಳ್ಳಿ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ. ರೈತರು ಹಾಗೂ ನಾಲೆಗಳ ಆಧುನೀಕರಣಗಳ ಬಗ್ಗೆ ಕಾಳಜಿ ಹೊಂದಿದ್ದ ಏಕೈಕ ಶಾಸಕ ಎಂದರೆ ಎಂದು ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮಾತ್ರ ಎಂದರು.

ರಾಜಕಾರಣಿಗಳ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಮಂಡ್ಯ, ಬೆಂಗಳೂರು ಜನರಿಗೂ ಕುಡಿಯುವ ನೀರಿನ ಹಾಹಾಕಾರ ಎದುರಾಗುವ ಸನ್ನಿವೇಶ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರು ಕುಟುಂಬಕ್ಕಿಂತ ಹೆಚ್ಚಾಗಿ ರೈತ ಸಂಘಟನೆ, ಚಳವಳಿಗಳಿಗೆ ಸಮಯ ನೀಡುತ್ತಿದ್ದರು. ಹಗಲು ರಾತ್ರಿ ಎನ್ನದೆ ಚಳವಳಿಯಲ್ಲಿ ತೊಡಗಿಸಿಕೊಂಡು ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ರೈತಸಂಘಟನೆ ಮತ್ತಷ್ಟು ಬಲವರ್ಧನೆಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದ ರೈತ ಸಂಘಟನೆ ಆರಂಭಗೊಂಡು 45 ವರ್ಷ ಪೂರೈಸಿದೆ. ಚಳವಳಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 100 ಕ್ಷೇತ್ರಗಳಲ್ಲಿ ರೈತ ಸಂಘದ ಅಭ್ಯರ್ಥಿ ಸ್ಪರ್ಧಿಸಲು ಕ್ರಮ ವಹಿಸಲಾಗಿದೆ. ರಾಜ್ಯದ ಎಲ್ಲಾ ಹಳ್ಳಿ- ಹಳ್ಳಿಗಳಲ್ಲಿ ರೈತ ಸಂಘದ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಎಂದರು.

ಇದಕ್ಕೂ ಮುನ್ನ ಕ್ಯಾತನಹಳ್ಳಿಯ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿಗೆ ರೈತಸಂಘದ ಕಾರ್‍ಯಕರ್ತರು, ಮುಖಂಡರು ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಗೈರು:

ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅಮೆರಿಕಾಗೆ ತೆರಳಿರುವ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುಣ್ಯಸ್ಮರಣೆ ಕಾರ್‍ಯಕ್ರಮಕ್ಕೆ ಗೈರಾಗಿದ್ದರು. ಕಾರ್ಯಕ್ರಮದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವಿಜಿಕುಮಾರ್, ಪ್ರಧಾನ ಕಾರ್‍ಯದರ್ಶಿ ಮಂಜುನಾಥ್, ರೈತ ಹೋರಾಟಗಾರ ಶಿವಕುಮಾರ್, ಹೊಸಕೋಟೆ ಬಸವರಾಜ್, ಗೋಪಾಲ್, ಯಶವಂತ್, ನಂದಿನಿ ಜಯರಾಮ್, ಯದುಶೈಲಾ ಸೇರಿ ಹಲವರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ