ರಾಜಕಾರಣ ಮಾಡುವವರು ಪಕ್ಷದ ಆಲೋಚನೆ, ಸಿದ್ಧಾಂತ ಒಪ್ಪಿಕೊಂಡಿರಬೇಕು: ತನ್ವೀರ್ ಸೇಠ್

KannadaprabhaNewsNetwork | Published : Jul 22, 2024 1:22 AM

ಸಾರಾಂಶ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 26 ವಿವಿಧ ಘಟಕಗಳನ್ನು ಪ್ರಾರಂಭಿಸಿದ್ದು, ಪಕ್ಷ ಸಂಘಟಿಸಲು ಎಲ್ಲಾ ರೀತಿಯ ತಯಾರಿಯನ್ನು ಮಾಡಲಾಗಿದೆ. ಪಕ್ಷದಿಂದ ಅಧಿಕಾರವನ್ನು ಪಡೆದುಕೊಂಡವರು ಜವಾಬ್ದಾರಿಯಿಂದ ತಮ್ಮ ಕೆಲಸಗಳನ್ನು ನಿರ್ವಹಣೆ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಹೆಚ್ಚಿನ ರೀತಿಯಲ್ಲಿ ಸಂಘಟನೆ ಆಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜಕಾರಣ ಮಾಡುವವರು ಪಕ್ಷದ ಆಲೋಚನೆ ಮತ್ತು ಸಿದ್ಧಾಂತಗಳನ್ನು ಒಪ್ಪಿಕೊಂಡಿರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ತನ್ವೀರ್ ಸೇಠ್ ತಿಳಿಸಿದರು.

ನಗರದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದವೀಧರರ ಘಟಕದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಮತ್ತು ಜಿಲ್ಲಾ ಪದವೀಧರರ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 26 ವಿವಿಧ ಘಟಕಗಳನ್ನು ಪ್ರಾರಂಭಿಸಿದ್ದು, ಪಕ್ಷ ಸಂಘಟಿಸಲು ಎಲ್ಲಾ ರೀತಿಯ ತಯಾರಿಯನ್ನು ಮಾಡಲಾಗಿದೆ. ಪಕ್ಷದಿಂದ ಅಧಿಕಾರವನ್ನು ಪಡೆದುಕೊಂಡವರು ಜವಾಬ್ದಾರಿಯಿಂದ ತಮ್ಮ ಕೆಲಸಗಳನ್ನು ನಿರ್ವಹಣೆ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಹೆಚ್ಚಿನ ರೀತಿಯಲ್ಲಿ ಸಂಘಟನೆ ಆಗುತ್ತದೆ ಎಂದರು.

ಸ್ವತಂತ್ರ ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಬೆಂಗಳೂರು ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿಯನ್ನು ಬರೆದು, ಪಂಚವಾರ್ಷಿಕ ಯೋಜನೆಗಳ ಮೂಲಕ ಕಾರ್ಖಾನೆಗಳು, ಕೃಷಿ, ಆಹಾರ ಪೂರೈಕೆ ಶಿಕ್ಷಣ ಎಲ್ಲಕ್ಕೂ ಹೆಚ್ಚಿನ ಮಹತ್ವವನ್ನು ಕೊಟ್ಟು ಮುನ್ನಡೆಸಿಕೊಂಡು ಬಂದಿದೆ ಎಂದು ಅವರು ಹೇಳಿದರು.

ಆದರೆ, ಈಗ ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿರುವ ಕೆಟ್ಟ ದುರಾಡಳಿತವನ್ನು ಪ್ರಜ್ಞಾವಂತ ನಾಗರಿಕ ಮತ್ತು ಯುವ ಸಮುದಾಯವು ಬಹಳ ಸೂಕ್ಷ್ಮವಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದೆ. ಭಾರತ ತಂತ್ರಜ್ಞಾನದಲ್ಲಿ ಇಷ್ಟೊಂದು ಸಾಧನೆ ಮಾಡಲು ಮೂಲ ಕಾರಣ ರಾಜೀವ್ ಗಾಂಧಿ. ಅವರು ರಾಷ್ಟ್ರದ ಯುವ ನಾಯಕರಾಗಿ ಜನರ ಧ್ವನಿಯಾಗಿದ್ದರು, ಅಂತಹ ಮಹಾನ್ ನಾಯಕರ ರೀತಿಯಲ್ಲಿ ಪಕ್ಷ ಸಿದ್ಧಾಂತ ಎಂದರೆ ಅದು ನನ್ನ ಸಿದ್ಧಾಂತ ಎಂದರು.

ರಾಜಕಾರಣ ಹೊರತಾದ ಬದುಕಿಲ್ಲ:

ಇದೇ ವೇಳೆ ರಾಜಕಾರಣದಲ್ಲಿ ಯುವ ಪರ್ವ, ಅನಿವಾರ್ಯತೆ? ಕುರಿತು ಕೆಪಿಸಿಸಿ ಮುಖ್ಯ ವಕ್ತಾರ ಅನಿಲ್ ಕುಮಾರ್ ತಡಕಲ್ ಮಾತನಾಡಿ, ಪ್ರತಿ ಮನೆಯಲ್ಲಿ ರಾಜಕೀಯದ ವಿಷಯವಾಗಿ ಚರ್ಚೆ ನಡೆಯಬೇಕು. ಪ್ರತಿಯೊಬ್ಬರ ನಡೆ ಮತ್ತು ಆಲೋಚನೆ, ರಾಜಕೀಯವಾಗಿರುತ್ತದೆ. ರಾಜಕಾರಣದ ಹೊರತಾದ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪ್ರತಿಯೊಬ್ಬ ಯುವಕರು ಕೂಡ ಪ್ರಗತಿಪರ ಆಲೋಚನೆಗಳ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮವಾದ ದೇಶ ಕಟ್ಟಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯು ತನ್ನ ನಿಲುವಿನ ಮೇಲೆ ಅರಿವು ಮತ್ತು ಹಿಡಿತವನ್ನು ಹೊಂದಿದ್ದಾಗ ಮಾತ್ರ ನಮಗೆ ರಾಜಕೀಯ ಪ್ರಜ್ಞೆ ಪ್ರಬುದ್ಧವಾಗಿ ಬೆಳೆಯುತ್ತದೆ ಎಂದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಪದವೀಧರ ಘಟಕದ ನೂತನ ಅಧ್ಯಕ್ಷರಾದ ಸಿದ್ದಾರ್ಥ್ ನಾಯಕ ಅವರಿಗೆ ಪದವೀಧರ ಘಟಕದ ರಾಜ್ಯಾಧ್ಯಕ್ಷ ನಟರಾಜ್ ಗೌಡ ಅವರು ಕಾಂಗ್ರೆಸ್ ಧ್ವಜ ನೀಡುವುದರ ಮೂಲಕ ಜವಾಬ್ದಾರಿ ವಹಿಸಿದರು. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಅಂಗವಾಗಿ ಸಂವಿಧಾನದ ಪ್ರಸ್ತಾವನೆ ಓದಿ ಪ್ರತಿಯೊಬ್ಬರಿಗೂ ಸಿಹಿ ವಿತರಿಸಲಾಯಿತು.

ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ಮುಖಂಡರಾದ ಹುಣಸೂರು ಬಸವಣ್ಣ, ಶಿವಪ್ರಸಾದ್, ಶಾಮಾ, ಯೋಗಿಶ್, ಲಕ್ಷ್ಮಣ್, ಉತ್ತನಹಳ್ಳಿ ಶಿವಣ್ಣ, ರಾಹುಲ್ ಕುಂಬರಹಳ್ಳಿ, ಜಮೀರ್, ಪುಟ್ಟಸ್ವಾಮಿ, ಸಿದ್ದರಾಜು ಮೊದಲಾದವರು ಇದ್ದರು.

Share this article