ಜಾತಿ ಗಣತಿ ವಿಚಾರ ರಾಜಕೀಕರಣ: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Oct 09, 2024, 01:37 AM IST
೮ಕೆಎಂಎನ್‌ಡಿ-೧೨ಕೆಆರ್‌ಸಾಗರದ ಬೃಂದಾವನದಲ್ಲಿನ ವಿಶೇಷ ದೀಪಾಲಂಕಾರ ಹಾಗು ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಫಲ ಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯ ಸ್ವಾಮಿ ಚಾಲನೆ ನೀಡಿದರು. | Kannada Prabha

ಸಾರಾಂಶ

ವಿಪಕ್ಷಗಳಿಗೆ ಬರಗಾಲದಲ್ಲಿ ರೈತರಿಗೆ ಪರಿಹಾರ ಕೊಡಿಸಲು ಆಗಲಿಲ್ಲ. ಈ ಹಿಂದೆ ಡಬಲ್ ಎಂಜಿನ್ ಸರ್ಕಾರ ಎನ್ನುತ್ತಿದ್ದರು, ನೀರಾವರಿ ಯೋಜನೆಗೆ ಭರವಸೆ ಕೊಟ್ಟ ಹಣ ಸಹ ಕೊಟ್ಟಿಲ್ಲ. ವಿರೋಧ ಪಕ್ಷದಲ್ಲಿ ಇದ್ದೇವೆ ಎಂದ ಮಾತ್ರಕ್ಕೆ ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡಿದ್ದಾರೆ. ಅವರ ಮಾತಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಜಾತಿ ಗಣತಿ ವಿಚಾರವನ್ನು ವಿಪಕ್ಷಗಳು ರಾಜಕೀಕರಣಗೊಳಿಸುತ್ತೀವೆ. ವರದಿಯಲ್ಲೇನಿದೆ ಎಂಬುದನ್ನೇ ತಿಳಿದುಕೊಳ್ಳದೆ ವಿರೋಧಿಸುವುದು ತಪ್ಪು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಕೆಆರ್‌ ಸಾಗರದ ಬೃಂದಾವನದಲ್ಲಿನ ವಿಶೇಷ ದೀಪಾಲಂಕಾರ ಹಾಗೂ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ವೀರಶೈವ, ಒಕ್ಕಲಿಗ ಸಂಘ ಸಂಸ್ಥೆಗಳು ಜಾತಿಗಣತಿಯನ್ನು ಬೇಡ ಎನ್ನುತ್ತಿದ್ದಾರೆ. ಜಾತಿ ಗಣತಿ ವರದಿಯನ್ನು ಸಂಪುಟದ ಮುಂದಿಟ್ಟು ಚರ್ಚಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಮೊದಲು ಜಾತಿ ಗಣತಿಯಲ್ಲೇನಿದೆ ಎಂಬುದನ್ನು ನೋಡೋಣ. ತಪ್ಪಿದ್ದರೆ ಸರಿಪಡಿಸೋಣ. ಉಪ ಸಮಿತಿ ರಚಿಸಲೂ ಅವಕಾಶವಿದೆ. ಇಡೀ ರಾಷ್ಟ್ರದಲ್ಲಿ ಜಾತಿ ಗಣತಿ ಮಾಡಬೇಕು ಎಂದು ಕೇಂದ್ರ ಸರ್ಕಾರವೇ ತೀರ್ಮಾನ ಮಾಡಿದೆ. ಇಲ್ಲಿ ವಿರೋಧಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ವಿಪಕ್ಷಗಳಿಗೆ ಬರಗಾಲದಲ್ಲಿ ರೈತರಿಗೆ ಪರಿಹಾರ ಕೊಡಿಸಲು ಆಗಲಿಲ್ಲ. ಈ ಹಿಂದೆ ಡಬಲ್ ಎಂಜಿನ್ ಸರ್ಕಾರ ಎನ್ನುತ್ತಿದ್ದರು, ನೀರಾವರಿ ಯೋಜನೆಗೆ ಭರವಸೆ ಕೊಟ್ಟ ಹಣ ಸಹ ಕೊಟ್ಟಿಲ್ಲ. ವಿರೋಧ ಪಕ್ಷದಲ್ಲಿ ಇದ್ದೇವೆ ಎಂದ ಮಾತ್ರಕ್ಕೆ ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡಿದ್ದಾರೆ. ಅವರ ಮಾತಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ. ಜನರು ನಮಗೆ ೧೩೬ ಸ್ಥಾನಗಳಲ್ಲಿ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಎರಡೂ ಪಕ್ಷದ ಮಹಾನುಭಾವರು ಸ್ವಾತಂತ್ರ್ಯ ಬಂದ ಮೇಲೆ ಎಷ್ಟು ಸ್ಥಾನಗಳಲ್ಲಿ ಗೆದ್ದಿದ್ದಾರೆ. ಬಿಜೆಪಿಯವರು ೧೧೩ ದಾಟಿಲ್ಲ, ಜೆಡಿಎಸ್‌ನವರು ೧೯೯೪ ರಲ್ಲಿ ೧೧೩. ಜನರು ಪೂರ್ತಿ ಬಹುಮತ ಕೊಟ್ಟಿದ್ದರೆ ಈ ರೀತಿ ಮಾತನಾಡಬಹುದು. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದ ಬಳಿ ಮಾತನಾಡಲು ಇವರಿಗೆ ತಾಕತ್ತಿಲ್ಲ. ರಾಜ್ಯದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಇನ್ನೂ ಮೂರು ವರ್ಷ ಹಾಗೇ ಮಾತನಾಡಲಿ ಎಂದರು.

ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕತೆಯಿಂದ ಕೂಡಿದೆ, ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇವೆ. ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡಿ ದೂರು ಕೊಟ್ಟಿದ್ದೇವೆ. ಹೆಚ್ಚು ಮನ್ನಣೆ ಕೊಟ್ಟಿಲ್ಲ, ಸಣ್ಣ ಪುಟ್ಟ ಸರಿಪಡಿಸಿದ್ದಾರೆ ಅಷ್ಟೆ. ಪ್ರಾರಂಭದಲ್ಲಿ ವೈಜ್ಞಾನಿಕವಾಗಿಲ್ಲ ಎಂದು ಹೇಳಿ ಪತ್ರ ಬರೆದಿದ್ದೇವೆ. ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದರು.

ದೀಪಾಲಂಕಾರ ಹಾಗೂ ಪುಷ್ಪ ಪ್ರದರ್ಶನ ಈ ಬಾರಿ ವಿಶೇಷವಾಗಿದ್ದು, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ. ದೀಪಾಲಂಕಾರ ಹೊಸದಲ್ಲ, ಶತಮಾನದಿಂದ ನಡೆಯುತ್ತಿದೆ. ಇಂದು ಕೇವಲ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಎರಡು ತಿಂಗಳು ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಪುಷ್ಪ ಪ್ರದರ್ಶನಕ್ಕೆ ಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಈ ವೇಳೆ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣಯ್ಯ, ಎಚ್.ಟಿ ಮಂಜು, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಮೈಸೂರು ವಿಭಾಗಿಯ ಹಾಗು ತೋಟಗಾರಿಕಾ ಕಾರ್ಯದರ್ಶಿ ರಮೇಶ, ಕಾ.ನೀ.ನಿಗಮ ಅಧಿಕ್ಷಕ ಅಭಿಯಂತರ ರಘುರಾಮ, ಕಾ.ನೀ.ನಿಗಮ ಕಾರ್ಯಪಾಲಕ ಅಭಿಯಂತರ ಜಯಂತ್, ತೋಟಗಾರಿಕೆ ನಿರ್ದೆಶಕಿ ರೂಪಶ್ರೀ, ಸಹಾಯಕ ನಿರ್ದೇಶಕಿ ಸೌಮ್ಯ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ