ಎಲ್ಲಾ ವಿಷಯ ವಿಚಾರಗಳಲ್ಲಿ ಪ್ರವೇಶ ಮಾಡಿದ ರಾಜಕೀಯವು ಸಾಹಿತ್ಯದಲ್ಲಿ ಅಂತರ್ಗತವಾಗಿರುತ್ತದೆ ಎಂದು ಖ್ಯಾತ ಸಾಹಿತಿ ವಿವೇಕ್ ಶಾನಭಾಗ್ ಅವರು ಅಭಿಪ್ರಾಯಪಟ್ಟರು.
ಶಿವಮೊಗ್ಗ: ಎಲ್ಲಾ ವಿಷಯ ವಿಚಾರಗಳಲ್ಲಿ ಪ್ರವೇಶ ಮಾಡಿದ ರಾಜಕೀಯವು ಸಾಹಿತ್ಯದಲ್ಲಿ ಅಂತರ್ಗತವಾಗಿರುತ್ತದೆ ಎಂದು ಖ್ಯಾತ ಸಾಹಿತಿ ವಿವೇಕ್ ಶಾನಭಾಗ್ ಅವರು ಅಭಿಪ್ರಾಯಪಟ್ಟರು.
ಅವರು ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗದ ಸಾಹಿತ್ಯ ಸಂಘ ಏರ್ಪಡಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾಹಿತಿಗೆ ಸಾಮಾಜಿಕ ಬದ್ದತೆ ಬಹುಮುಖ್ಯ. ಸಾಮಾಜಿಕ ಸಂಬಂಧಗಳ ಬದಲಾವಣೆಗೆ ಸ್ಪಂದಿಸುವ ಸಾಹಿತಿ ರಾಜಕೀಯ ಸ್ಥಿತಿಗತಿಗಳನ್ನು ಅರಿತಿರಬೇಕು. ಅವುಗಳನ್ನು ರೂಪಕಗಳಲ್ಲಿ, ಪ್ರತಿಮೆಗಳ ಮೂಲಕ ಜ್ಞಾನ ಒದಗಿಸಿದಾಗ ಅಪಾಯವಿರುವುದಿಲ್ಲ. ಇಂದು ವಾಟ್ಸ್ಯಾಪ್, ಫೇಸ್ಬುಕ್ ಕ್ರಾಂತಿಗೆ ಒಳಗಾಗಿದ್ದೇವೆ. ಅವುಗಳನ್ನು ಬಿಡಿಸಿಕೊಂಡು ಬರಹದಲ್ಲಿ ತೊಡಗುವುದು ಅತಿ ಅಗತ್ಯವಾಗಿದೆ. ಇಂದು ಮಾಧ್ಯಮಗಳೆಲ್ಲ ವ್ಯಾವಹಾರಿಕವಾಗಿವೆ. ಮನುಷ್ಯ ಸಂಬಂಧಗಳ ಸಂವರ್ಧನೆ ಆಗುವ ತುರ್ತು ಇದೆ. ಇದು ಸಾಹಿತ್ಯದಿಂದ ಸಾಧ್ಯ ಎಂದರು.
ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಾಹಿತ್ಯದಿಂದ ಸಮಾಜ ಕಲ್ಯಾಣವಾಗುವ ಬಗೆಯನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ ಶರತ್ ಅನಂತ್ ಮೂರ್ತಿ ವಹಿಸಿ ಜೀವನ ಅನುಭವಗಳನ್ನು ನೀಡುವ ಸಾಹಿತ್ಯಕ್ಕೆ ಬಹು ಪ್ರಾಮುಖ್ಯತೆಯಿದೆ. ಇಂತಹ ಸಾಹಿತ್ಯ ಅಧ್ಯಯನ ಮೂಲಕ ಉತ್ತಮವಾಗಿ ಬದುಕಲು ಸಾಧ್ಯವೆಂದು ತಿಳಿಸಿದರು.
ಕನ್ನಡಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಾದಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಜವಾಹರ ನೆಹರೂ ವಿಶ್ವವಿದ್ಯಾಲಯದ ಭೌತವಿಜ್ಞಾನಿ ಪ್ರೊ. ಶ್ರೀಕಾಂತಶಾಸ್ತ್ರಿ ಭಾಗವಹಿಸಿದ್ದರು. ಡಾ ನವೀನ್ ಮಂಡಗದ್ದೆ ನಿರೂಪಿಸಿ, ಡಾ ರವಿ ನಾಯ್ಕ ವಂದಿಸಿದರು. ಡಾ ಮುತ್ತಯ್ಯ, ಡಾ ಎಸ್.ವಿ. ಪುರುಷೋತ್ತಮ, ಡಾ ಮಂಜುನಾಥ್ ಟಿ. ಓಬಳೇಶ್, ರವಿಕುಮಾರ್ ಮೊದಲಾದವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.