ಚನ್ನಗಿರಿ: ತಾಲೂಕಿನ ದಿಗ್ಗೇನಹಳ್ಳಿ ಗ್ರಾಮದಲ್ಲಿ ಮನೆ ಮತ್ತು ನಿವೇಶನ ರಹಿತರು ಗ್ರಾಮದ ಮುಂಭಾಗದ ಸರ್ಕಾರಿ ಜಾಗದಲ್ಲಿ ಗೂಟಗಳನ್ನು ನೆಟ್ಟು ಮನೆ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ.
ಈ ಗ್ರಾಮದ ಮುಂಭಾಗದಲ್ಲಿ ಸರ್ಕಾರಿ ಜಮೀನಿದ್ದು, ಈ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಅದನ್ನು ಕೂಡಲೇ ತೆರವು ಗೊಳಿಸಬೇಕು. ಮನೆ ಮತ್ತು ನಿವೇಶನಗಳಿಲ್ಲದ ಬಡವರಿಗೆ ಕೂಡಲೇ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಈ ಗ್ರಾಮದ ಸಮೀಪದಲ್ಲಿಯೇ ದೇವರ ಜಮೀನು ಇದ್ದು ಅಲ್ಲಿಯಾದರೂ ನಿವೇಶನ ಮಂಜೂರು ಮಾಡಿ ಕೊಡಬೇಕು. ದೀನ ದಲಿತರ ಪರವಾಗಿ ಅಧಿಕಾರಿಗಳು ಕೆಲಸ ಮಾಡಬೇಕಾಗಿದ್ದು, ಉಳ್ಳವರ ಪರವಾಗಿ ಅಧಿಕಾರಿಗಳು-ಜನಪ್ರತಿನಿಧಿಗಳು ಕೆಲಸ ಮಾಡಿದರೆ ಬಡವರು ದಂಗೆ ಹೇಳುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಪಿಡಿಒ ಆಶಾ, ಅಧ್ಯಕ್ಷೆ ಶೋಭಾ, ಸದಸ್ಯರಾದ ರಾಧಮ್ಮ, ಜಯಮ್ಮ, ನಾಗರಾಜ್, ಮಂಜಪ್ಪ ಭೇಟಿ ನೀಡಿ ಪ್ರತಿಭಟನಾ ನಿರತರಿಂದ ಅಹವಾಲು ಆಲಿಸಿದರು.