ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು: ಓಂಕಾರಗೌಡ

KannadaprabhaNewsNetwork | Published : Jul 24, 2024 12:16 AM

ಸಾರಾಂಶ

ಹಿತ್ತಲ ಬಾಗಿಲಿನ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರನ್ನು ಸಹಕಾರ ಕ್ಷೇತ್ರದಲ್ಲಿ ನೇಮಕ ಮಾಡಿ ರಾಜಕೀಯಗೊಳಿಸಲು ಸರ್ಕಾರ ಹೊರಟಿದೆ ಎಂದು ಬಿಜೆಪಿಯ ಸಹಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಓಂಕಾರಗೌಡ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಜ್ಯ ಸರ್ಕಾರ ಸಹಕಾರ ರಂಗದಲ್ಲೂ ರಾಜಕೀಯ ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡಲು ಹೊರಡುತ್ತಿರುವುದು ಸರಿಯಲ್ಲ. ಈ ಬಾರಿ ಅಧಿವೇಶನದಲ್ಲಿ ಸಹಕಾರ ಕಾಯ್ದೆ ಮಸೂದೆ ತಿದ್ದುಪಡಿ ಮಾಡಲು ಹೊರಟಿದೆ. ಇದರಿಂದ ಸಹಕಾರ ರಂಗಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಬಿಜೆಪಿಯ ಸಹಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಓಂಕಾರಗೌಡ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡಲು ಹೊರಟಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ)ಗಳಿಗೂ ತಲಾ ಮೂವರನ್ನು ಸರ್ಕಾರ ನಾಮ ನಿರ್ದೇಶನ ಮಾಡಲು ಹೊರಟಿದೆ. ಜೊತೆಗೆ ಅವರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೂ ಸ್ಪರ್ಧೆ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಸಹಕಾರ ಕ್ಷೇತ್ರದ ಮೇಲೂ ಸರ್ಕಾರ ಹಿಡಿತ ಸಾಧಿಸಲು ಹೊರಟಿದೆ. ಹಿತ್ತಲ ಬಾಗಿಲಿನ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರನ್ನು ಸಹಕಾರ ಕ್ಷೇತ್ರದಲ್ಲಿ ನೇಮಕ ಮಾಡಿ ರಾಜಕೀಯಗೊಳಿಸಲು ಸರ್ಕಾರ ಹೊರಟಿದೆ. ಸಹಕಾರ ಕ್ಷೇತ್ರದ ಬಲವರ್ಧನೆಗೆ ಆದ್ಯತೆ ನೀಡಬೇಕಾದ ಸರ್ಕಾರ, ಈ ಕ್ಷೇತ್ರವನ್ನು ಬಲಹೀನಗೊಳಿಸಲು ಹೊರಟಿದೆ ಎಂದು ದೂರಿದರು.

ಸಹಕಾರ ಸಚಿವಾಲಯ ಸ್ಥಾಪನೆಯ ನಂತರ ದೇಶದ ಒಟ್ಟು ಸಹಕಾರ ಸಂಸ್ಥೆಗಳು, ಒಟ್ಟು ಸಹಕಾರ ಸದಸ್ಯರು ಅವುಗಳ ಸ್ವರೂಪ ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಡಿಸೆಂಬರ್ 2023ರ ವರೆಗೆ ಒಟ್ಟು ಮೂರು ಹಂತದ ಬೇರೆ ಬೇರೆ ಸ್ವರೂಪಗಳನ್ನೊಳಗೊಂಡ ಸಹಕಾರಿ ಸಂಸ್ಥೆಗಳ ಮಾಹಿತಿ ಪಡೆಯಲಾಗಿದೆ.

ಕೇರಳ ಹಾಗೂ ಮಣಿಪುರ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳ ಪೂರ್ಣ ಮಾಹಿತಿ ಸಂಗ್ರಹವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಈ ಅಂಕಿ ಅಂಶಗಳು ಲಭ್ಯವಾಗಿವೆ ಎಂದರು.

ದೇಶದಲ್ಲಿ ಸಹಕಾರ ಚಳವಳಿ ಬಲಪಡಿಸುವಿಕೆ, ತಳಮಟ್ಟದ ವರೆಗೆ ಅದರ ವ್ಯಾಪ್ತಿ ಹೆಚ್ಚಿಸುವುದು, ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ, ಸೂಕ್ತ ನೀತಿ, ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟು ರಚನೆ, ಸದಸ್ಯರ ಆರ್ಥಿಕ ಪಾಲ್ಗೊಳ್ಳುವಿಕೆ, ಸ್ವಾಯತ್ತ ಮತ್ತು ಸ್ವಾತಂತ್ರ್ಯ, ಶಿಕ್ಷಣ ಮತ್ತು ತರಬೇತಿ, ಮಾಹಿತಿ, ಸಹಕಾರ ಸಂಘಗಳ ಮಧ್ಯೆ ಉನ್ನತ ಸಹಕಾರ ಸೇರಿದಂತೆ ಸಹಕಾರ ಕ್ಷೇತ್ರದ ಬಲವರ್ಧನೆಗೆ ಕೇಂದ್ರ ಸಹಕಾರ ಸಚಿವರಾದ ಅಮಿತ್‌ ಷಾ ಅವರು ಸಹಕಾರ ಕ್ಷೇತ್ರವನ್ನು ಶ್ರಮಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಸಹಕಾರಿಗಳ ಹಾಗೂ ಸಹಕಾರ ಸಂಘಗಳ ಹಿತಾಸಕ್ತಿ ವಿರುದ್ಧವಾಗಿ ಕಾನೂನು ತರಲು ಹೊರಟಿದೆ. ಇದು ಕರ್ನಾಟಕದ ಎಲ್ಲ ಸಹಕಾರಿಗಳಿಗೆ ಆಘಾತವನ್ನು ಉಂಟು ಮಾಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಜಿಲ್ಲಾ ವಕ್ತಾರ ಅಶೋಕ್‌ ಜೀರೆ, ಸಹಕಾರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ, ಜಿಲ್ಲಾ ಮಾಧ್ಯಮ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಹರಪನಹಳ್ಳಿ ಮಂಡಳ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ, ಹೊಸಪೇಟೆ ಮಂಡಲ ಮಾಧ್ಯಮ ಸಂಚಾಲಕಿ ಅನುರಾಧಾ ಇದ್ದರು.

Share this article