ಮಾಗಡಿ: ಜನರ ಬದುಕನ್ನು ಹಸನು ಮಾಡುವುದು ಬಿಟ್ಟು ಕೇವಲ ಪ್ರತಿಮೆಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರಿಗೆ ಜನರೇ ಬುದ್ಧಿ ಕಲಿಸಬೇಕು ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು
ಮಾಗಡಿ: ಜನರ ಬದುಕನ್ನು ಹಸನು ಮಾಡುವುದು ಬಿಟ್ಟು ಕೇವಲ ಪ್ರತಿಮೆಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರಿಗೆ ಜನರೇ ಬುದ್ಧಿ ಕಲಿಸಬೇಕು ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ವಿರೋಧಿಸುತ್ತಿರುವ ಎಚ್.ಎಂ.ಕೃಷ್ಣಮೂರ್ತಿ ಅವರ ವಿರುದ್ಧ ಹರಿಹಾಯ್ದ ಶಾಸಕರು, ವೈಯಕ್ತಿಕ ಹಿತಾಸಕ್ತಿಗಾಗಿ ಪ್ರತಿಮೆಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಬಡವರಿಗಾಗಿ 42 ಕೋಟಿ ರು. ವೆಚ್ಚದ ಆಸ್ಪತ್ರೆ ಹಾಗೂ 6 ಕೋಟಿ ವೆಚ್ಚದ ಅಂಬೇಡ್ಕರ್ ಭವನ ನಿರ್ಮಿಸಲು ಹೊರಟರೆ ಅಡ್ಡಗಾಲು ಹಾಕುತ್ತಿದ್ದಾರೆ. ಮರಗಳ ಹೆಸರಿನಲ್ಲಿ ಕೇಸ್ ಹಾಕಿ ಅಭಿವೃದ್ಧಿ ಕುಂಠಿತಗೊಳಿಸುತ್ತಿರುವ ಇವರಿಗೆ ಅಂಬೇಡ್ಕರ್ ಎಂದರೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ದೇಶಕ್ಕೆ ಸಂವಿಧಾನ ನೀಡುವ ಮೂಲಕ ಶೋಷಿತ ವರ್ಗದವರು ಮುಖ್ಯವಾಹಿನಿಗೆ ಬರಲು ಅಂಬೇಡ್ಕರ್ ದಾರಿದೀಪವಾದರೆ, ಹಸಿರು ಕ್ರಾಂತಿಯ ಮೂಲಕ ದೇಶದ ಹಸಿವು ನೀಗಿಸಿದ ಕೀರ್ತಿ ಬಾಬು ಜಗಜೀವನ್ ರಾಂ ಅವರಿಗೆ ಸಲ್ಲುತ್ತದೆ ಎಂದು ಶಾಸಕರು ಸ್ಮರಿಸಿದರು.ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸೋತಿದ್ದರೂ ಅವರ ವಿದ್ವತ್ತನ್ನು ಗುರುತಿಸಿ ದೇಶದ ಮೊದಲ ಕಾನೂನು ಸಚಿವರನ್ನಾಗಿ ಗೌರವಿಸಿದ್ದು ಕಾಂಗ್ರೆಸ್ ಸರ್ಕಾರ. ಅಂದು ಇಂದಿರಾಗಾಂಧಿಯವರು ತಂದ ಉಳುವವನೇ ಭೂಮಿಯ ಒಡೆಯ ಕಾಯ್ದೆಯಿಂದ ಹಿಡಿದು ಇಂದಿನ ಅನ್ನಭಾಗ್ಯ, ಗೃಹಲಕ್ಷ್ಮಿ ಗ್ಯಾರಂಟಿಗಳವರೆಗೆ ಎಲ್ಲವೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಪ್ರತಿಫಲವೇ ಆಗಿದೆ ಎಂದರು.
ರೈತ ಸಂಘಕ್ಕೆ ಸವಾಲು:
ಕಾವೇರಿ ನೀರಿನ ಪೈಪ್‌ಲೈನ್ ವಿಚಾರದಲ್ಲಿ ಹೇಳಿಕೆ ನೀಡಿದ ರೈತ ಹೋರಾಟಗಾರರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಬಾಲಕೃಷ್ಣ, ವಿಷಯ ತಿಳಿಯದೆ ಆರೋಪ ಮಾಡಬೇಡಿ, ಮಾಗಡಿ ತಾಲೂಕಿಗೆ ನೀರು ತರುವ ಬದ್ಧತೆ ನನಗಿದೆ. ನಿಮಗೆ ನಿಜವಾದ ಬದ್ಧತೆ ಇದ್ದರೆ ತುಮಕೂರಿನಲ್ಲಿ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ನಡೆಯುವ ಹೋರಾಟಕ್ಕೆ ಬನ್ನಿ, ನಾನು ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ಸವಾಲು ಹಾಕಿದರು.
ಬಹಿರಂಗ ಚರ್ಚೆಗೆ ಆಹ್ವಾನ:
ಮಾಜಿ ಶಾಸಕ ಎ.ಮಂಜುನಾಥ್ ಅವರು ತಮ್ಮ ಕುಟುಂಬದ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು, ಏಪ್ರಿಲ್ 25ರಂದು ಚಕ್ರಬಾವಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಹಿರಂಗ ಸಭೆ ಕರೆದಿದ್ದಾರೆ ಮಾಜಿ ಶಾಸಕರು ದಾಖಲೆ ಸಮೇತ ಅಲ್ಲಿಗೆ ಬರಲಿ, ತಾತ್ವಿಕವಾಗಿ ಎಲ್ಲವೂ ಇತ್ಯರ್ಥವಾಗಲಿ ಎಂದು ಶಾಸಕರು ಬಹಿರಂಗ ಆಹ್ವಾನ ನೀಡಿದರು.
ದಲಿತ ಮುಖಂಡ ಬ್ಯಾಲಕೆರೆ ಚಿಕ್ಕರಾಜು ಮಾತನಾಡಿ, ಅಂಬೇಡ್ಕರ್ ಭವನ ವಿರೋಧ ಮಾಡುತ್ತಿರುವ ವಿರೋಧ ಪಕ್ಷದ ವಿರುದ್ಧ ಅವರು ಎಲ್ಲೇ ಬಂದರೂ ನಾವು ಅವರಿಗೆ ಕಪ್ಪು ಬಾವುಟ ತೋರಿಸುತ್ತವೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಮ್ಮ ಪ್ರಾಣ ಕೊಡಲು ಸಿದ್ಧ. ಶಾಸಕ ಬಾಲಕೃಷ್ಣರವರು ಕಾಲೋನಿಗಳಲ್ಲಿ ಹಕ್ಕುಪತ್ರ ವಿತರಣೆ ಮಾಡಿ ದಲಿತರ ಪರ ನಿಂತಿದ್ದಾರೆ. ಬಾಲಕೃಷ್ಣರವರ ವೇಗಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಎಷ್ಟೋ ಅರ್ಜಿಗಳು ಇಲ್ಲಿಯವರೆಗೂ ವಿಲೇವಾರಿ ಆಗುತ್ತಿಲ್ಲ. ಇದರ ಬಗ್ಗೆ ಶಾಸಕರು ಗಮನಿಸಿ ಅಧಿಕಾರಿಗಳಿಂದ ಕೆಲಸ ಮಾಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಸಿ.ಚಂದ್ರಪ್ಪ, ತಹಸೀಲ್ದಾರ್ ಶರತ್ ಕುಮಾರ್, ಕಲ್ಕೆರೆ ಶಿವಣ್ಣ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಇಒ ಚಂದ್ರಶೇಖರ್, ಇಒ ಜೈಪಾಲ್, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ಉಮಾದೇವಿ, ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ದೊಡ್ಡಿ ಲಕ್ಷ್ಮಣ್, ತಿ.ನಾ. ಪದ್ಮನಾಭ, ವನಜ, ಪ್ರಕಾಶ್, ಗೋಪಾಲ್, ಶಿವಕುಮಾರ್, ಕುಮಾರ್, ಶಿವಪ್ರಸಾದ್, ದೀಪಕ್ ಇತರರು ಭಾಗವಹಿಸಿದ್ದರು.
(ಪೋಟೋ ಕ್ಯಾಫ್ಞನ್)
ಮಾಗಡಿ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.