ಶಹಾಪುರ : ದೇಶದ ಅಭಿವೃದ್ಧಿಗಿಂತ ದ್ವೇಷದ ರಾಜಕಾರಣ ಮಾಡುವುದು ಬಿಜೆಪಿಯವರ ಸಿದ್ಧಾಂತವಾಗಿದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು.
ನಗರದ ಸಚಿವರ ಗೃಹ ಕಚೇರಿಯಲ್ಲಿ ಈ ಕುರಿತು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಹೆದರುವ ಪ್ರಶ್ನೆಯೆ ಇಲ್ಲ. ಕಾನೂನಾತ್ಮಕ ಹೋರಾಟ ಮಾಡಿ, ಬಿಜೆಪಿಯವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇದು ದ್ವೇಷದ ರಾಜಕಾರಣ ಅನ್ನೋದು ಸ್ಪಷ್ಟವಾಗಿದೆ. ರಾಜಭವನ ಬಿಜೆಪಿಯ ಕೇಂದ್ರ ಕಚೇರಿಯಾಗಿದೆ. ರಾಜ್ಯದಲ್ಲಿ ಹೇಗಾದರೂ ಮಾಡಿ ಸರ್ಕಾರವನ್ನು ಬೀಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ. ಅವರ ಮೇಲೆ ಕೇಂದ್ರ ಸರ್ಕಾರದ ಒತ್ತಡವಿದೆ ಎಂದು ಸಚಿವರು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ ಈ ಕುತಂತ್ರ ನಡೆಸಿದೆ. ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಈ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿಯೇತರ ರಾಜ್ಯಗಳ ಮೇಲೆ ಈಡಿ, ಸಿಬಿಐನಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಸೀಬು ಸೊರೇನ್ ಸೇರಿದಂತೆ ಹಲವು ವ್ಯಕ್ತಿಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈಗ ಸೇಡಿನ ಅಸ್ತ್ರ ಕರ್ನಾಟಕದ ಕಾಂಗ್ರೆಸ್ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಆರೋಪಿಸಿದರು.
ಕುಮಾರಸ್ವಾಮಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವು ದುರುಪಯೋಗ ಮಾಡಿಕೊಂಡ ಪ್ರಕರಣಗಳು ರಾಜ್ಯಪಾಲರ ಭವನದಲ್ಲಿವೆ. ಅದೇ ರೀತಿಯಾಗಿ ನಿರಾಣಿ, ಪ್ರಭಾಕರ್ ಜೊಲ್ಲೆ ಸೇರಿದಂತೆ ಇತರ ವ್ಯಕ್ತಿಗಳ ಪ್ರಕರಣಗಳು ಕೂಡ ಕಳೆದ ಮೂರು ವರ್ಷದಿಂದ ರಾಜ್ಯಪಾಲರ ಭವನದಲ್ಲಿ ಕೊಳೆಯುತ್ತಿವೆ. ಅವುಗಳೆಲ್ಲವನ್ನು ಬದಿಗೊತ್ತಿ ಒಂದೇ ದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯಪಾಲರು ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಅಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರಲು ಮುಡಾ ಹಗರಣ ಬಿಜೆಪಿ ಮತ್ತು ಜೆಡಿಎಸ್‌ನವರು ಬಳಕೆ ಮಾಡಿಕೊಂಡಿದ್ದಾರೆ. 1935 ರಲ್ಲಿ ದಲಿತ ಕುಟುಂಬಕ್ಕೆ ಸೇರಿದ 3 ಎಕರೆ 16 ಗುಂಟೆ ಜಮೀನನ್ನು 1994 ರಲ್ಲಿ ಪರಭಾರೆ ಮಾಡಿಕೊಳ್ಳಲಾಯಿತು. 1997ರಲ್ಲಿ ಆ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಲಾಗಿದ್ದು, 2004ರಲ್ಲಿ ಮುಖ್ಯಮಂತ್ರಿ ಸಹೋದರ ಖರೀದಿ ಮಾಡಿ 2005ರಲ್ಲಿ ತನ್ನ ಸಹೋದರಿಗೆ ದೇಣಿಗೆಯಾಗಿ ನೀಡಿದ್ದಾನೆ. 2022 ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮುಡಾ ಅಧ್ಯಕ್ಷರು ಬಿಜೆಪಿಯವರೇ ಆಗಿದ್ದರು. ಅದನ್ನು ಆಗಲೇ ತನಿಖೆ ಮಾಡಬಹುದಿತ್ತು ಯಾಕೆ ಮಾಡಲಿಲ್ಲ? ಇದು ಇಲ್ಲಿಯವರೆಗೆ ಬಿಜೆಪಿಯವರ ಕಣ್ಣಿಗೆ ಬಿದ್ದಿರಲಿಲ್ಲವೇ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.
ಎಚ್.ಡಿ. ರೇವಣ್ಣನ ಮಕ್ಕಳು ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣನ ಪ್ರಕರಣಗಳು ಅತ್ಯಂತ ಗಂಭೀರವಾದ ಪ್ರಕರಣಗಳಾಗಿವೆ. ಬಿಜೆಪಿಯವರು ಇವುಗಳನ್ನು ಸಿಬಿಐಗೆ ಕೊಡಿ ಎಂದು ಯಾಕೆ ಹೇಳುವುದಿಲ್ಲ. ಕಾಂಗ್ರೆಸ್ ಪ್ರಕರಣಗಳನ್ನು ಮಾತ್ರ ಸಿಬಿಐಗೆ ಕೊಡಿ ಎಂದು ಹೇಳುತ್ತಾರೆ. ಹಾಗಾದರೆ ರಾಜ್ಯದಲ್ಲಿರುವ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಕೊಡುವಂತೆ ಬರೆದು ಕೊಡಲಿ. ಬಿಜೆಪಿ ಅವರು ಅದಕ್ಕಾದರೂ ಸಿದ್ಧವಾಗಿದ್ದಾರಾ ಎಂದರು.
ಬಿಜೆಪಿಯವರು ಮಾತೆತ್ತಿದರೆ ನಾವು ರೈತರ ಪರ, ನಾವು ರೈತರ ಪರ ಎಂದು ಹೇಳುವವರಿಗೆ ರೈತರ ಕಷ್ಟ ಅರ್ಥವಾಗುವುದಿಲ್ಲವೆ. ಬಿಜೆಪಿಯವರು ಒಂದೇ ಒಂದು ಜನಪರ ಕೆಲಸವನ್ನು ತೋರಿಸಲಿ ನೋಡೋಣ. ಬಂಡವಾಳಶಾಹಿ ಪರ ಇರುವ ಕೇಂದ್ರ ಸರ್ಕಾರ ಕೋರೊನಾ ಸಂದರ್ಭದಲ್ಲಿ 20 ಸಾವಿರ ಕೋಟಿ ರು.ಗಳನ್ನು ಮನ್ನಾ ಮಾಡಿತು. ರೈತರ ಪರ ಯಾವತ್ತೂ ಸಾಲ ಮನ್ನಾ ಮಾಡಲಿಲ್ಲ ಎಂದರು.
ಬಿಜೆಪಿಯವರ ಹಗರಣಗಳ ಬಗ್ಗೆ ಮಾತನಾಡಲು ನಿಂತರೆ ದಿನಪೂರ್ತಿ ಮಾತನಾಡಿದರೂ ಮುಗಿಯುವುದಿಲ್ಲ. ಅವರಂತೆ ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್‌ಗೆ ಏನಿದ್ದರೂ ದೇಶದ ಮತ್ತು ಜನತೆಯ ಹಿತ ಹಾಗೂ ಅಭಿವೃದ್ಧಿನೆ ಮುಖ್ಯ ಎಂದು ಕಾಂಗ್ರೆಸ್ ಆಡಳಿತ ಹಾಗೂ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಂಡರು.