ಕಾಂಗ್ರೆಸ್‌ ಸರ್ಕಾರದಿಂದ ದ್ವೇಷದ ರಾಜಕಾರಣ

KannadaprabhaNewsNetwork | Published : Nov 18, 2024 12:03 AM

ಸಾರಾಂಶ

ಕೋವಿಡ್ ಹಗರಣವನ್ನು ತನಿಖೆ ನಡೆಸಲು ಯಾವುದೇ ವಿರೋಧವಿಲ್ಲ. ಆದರೆ, ದ್ವೇಷದ ರಾಜಕಾರಣ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೋವಿಡ್ ಹಗರಣವನ್ನು ತನಿಖೆ ನಡೆಸಲು ಯಾವುದೇ ವಿರೋಧವಿಲ್ಲ. ಆದರೆ, ದ್ವೇಷದ ರಾಜಕಾರಣ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಕೋವಿಡ್ ಮಹಾಮಾರಿ ಸಾಕಷ್ಟು ಜೀವ ಹಾನಿ ಮಾಡಿದೆ. ಯಡಿಯೂರಪ್ಪನವರು ತೆಗೆದುಕೊಂಡ ನಿರ್ಧಾರದಿಂದ ನಾವೆಲ್ಲರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ದ್ವೇಷಕ್ಕೋಸ್ಕರ ಎಸ್‌ಐಟಿ ತನಿಖೆಗೆ ವಹಿಸಿದೆ. ಮೈಕಲ್ ಕುನ್ನಾ ವರದಿ ಆಧರಿಸಿ ತನಿಖೆಗೆ ವಹಿಸಲಾಗಿದೆ. ಅರ್ಕಾವತಿ ರಿಡೂ ಪ್ರಕರಣ ಕುರಿತು ಯಾಕೆ ತನಿಖೆಗೆ ವಹಿಸಿಲ್ಲ ಎಂದು ಪ್ರಶ್ನಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ನೀಡಿದ ಚುನಾವಣಾ ಪ್ರಣಾಳಿಕೆಯನ್ನೇ ಆಡಳಿತಾರೂಢ ಕಾಂಗ್ರೆಸ್ ಮರೆತಿದೆ. ಚುನಾವಣೆ ಮುಗಿದು, ಕಾಂಗ್ರೆಸ್ ಸರ್ಕಾರ ರಚನೆಯಾಗಿ 12 ತಿಂಗಳುಗಳೇ ಕಳೆದಿದೆ. ಯಾವ ಇಲಾಖೆಗೂ ಇಲ್ಲಿಯವರೆಗೆ ಒಂದು ನಯಾ ಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಎಲ್ಲಿಯಾದರೂ ಸರ್ಕಾರದ ಕಾಮಗಾರಿಗೆ ಒಂದು ಗುದ್ದಲಿ ಪೂಜೆ ಆಗಿದ್ದನ್ನು ಕಾಂಗ್ರೆಸ್ ನವರು ತೋರಿಸಲಿ ಎಂದು ಸವಾಲು ಎಸೆದರು.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯ ದೊಡ್ಡ ದೊಡ್ಡ ಪಟ್ಟಿಯನ್ನೇ ಮತದಾರರ ಮುಂದೆ ಇಟ್ಟಿತ್ತು. ಆದರೆ ಅದು ಮತದಾರರನ್ನು ತನ್ನತ್ತ ಸೆಳೆಯುವುದಷ್ಟಕ್ಕೇ ಸೀಮಿತವಾಗಿತ್ತು ಎಂದು ಟೀಕಿಸಿದರು.ಪ್ರವಾಸೋಧ್ಯಮ ಅಭಿವೃದ್ಧಿಗಾಗಲೀ, ಕ್ರೀಡೆ, ರೈತರಿಗೆ ಅನುಕೂಲ ಮಾಡಿಕೊಡುವುದಾಗಲೀ, ಅಲ್ಪ ಸಂಖ್ಯಾತ, ಹಿಂದುಳಿದವರ ಕಲ್ಯಾಣಕ್ಕಾಗಲೀ, ನೀಡಿದ ಇನ್ಯಾವುದೇ ಭರವಸೆಗಳಿಗಾಗಲೀ ನಯಾಪೈಸೆ ಅನುದಾನ ನೀಡದೆ ರಾಜ್ಯದ ಪ್ರಜೆಗಳಿಗೆ ಸಿ.ಎಂ.ಸಿದ್ದರಾಮಯ್ಯ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು.ಶಿಕ್ಷಣ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣಕ್ಕಾಗಿ ಬಿಜೆಪಿ ಸರ್ಕಾರದ ಎನ್.ಇ.ಪಿ. ಅನುಷ್ಠಾನ ರದ್ದು ಮಾಡಿ, ಮತ್ತೆ ಕಾಂಗ್ರೆಸ್ ಎಸ್.ಇ.ಪಿ. ಜಾರಿಗೆ ತಂದು ಈ ಕ್ಷೇತ್ರವನ್ನು ಗೊಂದಲದ ಗೂಡಾಗಿಸಿದೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ನಾಗೇಶ್ ಅವರು, ಈಗ ಆ ಪ್ರಕ್ರಿಯೆಯನ್ನು ಕಾಂಗ್ರೆಸ್ ಮುಂದುವರೆಸಿ ತಾನೇ ಶಿಕ್ಷಕರ ನೇಮಕಾತಿಯನ್ನು ಮಾಡಿದಂತೆ ಬಿಂಬಿಸಿಕೊಳ್ಳುತ್ತಿದೆ ಎಂದರು.

ಖಾಲಿ ಹುದ್ದೆ ತುಂಬುವ ಗೋಜಿಗೇ ಸರ್ಕಾರ ಹೋಗಿಲ್ಲ. ಅಜೀಂ ಪ್ರೇಮ್ ಜೀ ಸಂಸ್ಥೆಯ ಸಹಯೋಗದೊಂದಿಗೆ ₹1600 ಕೋಟಿ ವೆಚ್ಚದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವ ಯೋಜನೆಯೂ ಸಮರ್ಪಕವಾಗಿಲ್ಲ. ಮೊಟ್ಟೆ ಬದಲಿಗೆ ವಿದ್ಯಾರ್ಥಿಗಳಿಗೆ ಹಾಲು, ಬಾಳೆಹಣ್ಣು, ಚಿಕ್ಕಿ ಕೊಡುತ್ತೇವೆ ಎಂದಿದ್ದ ಸಚಿವ ಮಧು ಬಂಗಾರಪ್ಪ ಅವರ ಮಾತೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕಿಡಿಕಾರಿದರು.ಬಡವರಿಗೆ ಒಂದು ಮನೆ ಕಟ್ಟಿ ಹಕ್ಕು ಪತ್ರ ನೀಡಿಲ್ಲ. ವಸತಿಗೆ ₹3 ನೀಡಬೇಕಿದ್ದು, ಒಂದು ನಯಾಪೈಸೆಯನ್ನೂ ನೀಡಿಲ್ಲ. ಈ ಮೂಲಕ ಸಿ.ಎಂ. ಸಿದ್ದರಾಮಯ್ಯ ತಮ್ಮ ಪ್ರಣಾಳಿಕೆಯನ್ನೇ ಮರೆತಿದ್ದಾರಾ ಎಂದು ಅರುಣ್ ಪ್ರಶ್ನಿಸಿದರು.ಕಾಂಗ್ರೆಸ್ ಪ್ರಣಾಳಿಕೆಯನ್ನು ಕಸದ ಬುಟ್ಟಿಗೆ ಹಾಕಬೇಕು ಎಂದ ಅವರು, ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ರೈತ ವಿರೋಧಿ ನೀತಿ, ದಲಿತ ವಿರೋಧಿ ನೀತಿ, ಹಿಂದುತ್ವ ವಿರೋಧಿ ನೀತಿ, ಅಭಿವೃದ್ಧಿ ವಿರೋಧಿ ನೀತಿ ಕಾಂಗ್ರೆಸ್ ಬದ್ಧತೆನಾ ಎಂದು ವ್ಯಂಗ್ಯವಾಡಿದರು.ಬರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಪ್ರಧಾನವಾಗಿ ಕಾಂಗ್ರಸ್ ಭ್ರಷ್ಟಾಚಾರ, ಅಭಿವೃದ್ಧಿ ಕುಂಟಿತ ಇತ್ಯಾದಿ ವಿಷಯಗಳನ್ನು ಗಂಭೀರವಾಗಿ ಚರ್ಚೆಗೆ ತೆಗೆದುಕೊಳ್ಳುತ್ತದೆ ಎಂದರು.ಗೋಷ್ಠಿಯಲ್ಲಿ ಮುಖಂಡರಾದ ಹರಿಕೃಷ್ಣ, ಶಿವರಾಜ್, ಚಂದ್ರಶೇಖರ, ಕೆ.ವಿ. ಅಣ್ಣಪ್ಪ ಇದ್ದರು.

Share this article