ಬಿಜೆಪಿಯಿಂದ ಧರ್ಮ ರಾಜಕಾರಣ: ಸಚಿವ ಮಹದೇವಪ್ಪ

KannadaprabhaNewsNetwork | Published : Feb 5, 2024 1:45 AM

ಸಾರಾಂಶ

ಬಿಜೆಪಿಯವರು ದೇವರು, ಧರ್ಮದ ಹೆಸರಿನಲ್ಲಿ ಜನರ ಮಧ್ಯ ವಿಷಬೀಜ ಬಿತ್ತುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಬಡವರು, ದೇಶದ ಅಭಿವೃದ್ದಿಯ ಚಿಂತನೆಯು ಇಲ್ಲ.

ಕುಷ್ಟಗಿ: ಬಿಜೆಪಿಯವರು ದೇವರು, ಧರ್ಮದ ಹೆಸರಿನಲ್ಲಿ ಜನರ ಮಧ್ಯ ವಿಷಬೀಜ ಬಿತ್ತುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಬಡವರು, ದೇಶದ ಅಭಿವೃದ್ದಿಯ ಚಿಂತನೆಯು ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.ಪಟ್ಟಣದ ಮಾಜಿ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೇವಲ ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಅವರಿಗೆ ಹಿಂದುಳಿದ, ದೀನ ದಲಿತರ ಹಾಗೂ ಬಡವರ ಅಭಿವೃದ್ಧಿ ಬೇಕಾಗಿಲ್ಲ ಎಂದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧರ್ಮದ ವಿಚಾರ ಇಟ್ಟುಕೊಂಡು ರಾಮಮಂದಿರ ನಿರ್ಮಾಣ ಮಾಡಲಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಇಡೀ ದೇಶದಲ್ಲೇ ಮಾದರಿಯಾಗಿವೆ. ಚುನಾವಣೆ ನಂತರ ಗ್ಯಾರಂಟಿ ಬಂದ್ ಆಗುತ್ತವೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಜಾರಿಗೆ ಮಾಡಿದ ಯೋಜನೆಗಳಿಗೆ ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.ಸಂವಿಧಾನಾತ್ಮಕವಾಗಿ ಆಡಳಿತ ಮಾಡಬೇಕೇ ಹೊರತು ದೇವರು ಹಾಗೂ ಧರ್ಮದ ಆಧಾರದಲ್ಲಿ ಆಡಳಿ ಮಾಡಬಾರದು. ಈ ದೇಶವು ಸಂವಿಧಾನ ಮೂಲಕ ಸರ್ವರಿಗೂ ಸಮಾನ ಹಕ್ಕು ನೀಡಿದೆ. ಅಂಬೇಡ್ಕರ್ ಆಶಯದಂತೆ ನಡೆಯುತ್ತಿದೆ. ಆದರೆ ಬಿಜೆಪಿಗರು ಧರ್ಮದ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಬೇಕಿಲ್ಲ. ಇಲ್ಲಿಯವರೆಗಾದರೂ ಬರಗಾಲ ಸಂಬಂಧಪಟ್ಟಂತೆ ಪರಿಹಾರವನ್ನು ಒಂದು ರುಪಾಯಿ ಕೊಟ್ಟಿಲ್ಲ ಎಂದರು.ಸಿಎಂ ಸಿದ್ದರಾಮಯ್ಯ ಸರ್ಕಾರ, ರಾಜ್ಯದ ಮಹಿಳೆಯರು, ಬಡವರು ದುರ್ಬಲರ ಆರ್ಥಿಕ ಸದೃಢಕ್ಕೆ ಯೋಜನೆ ಜಾರಿ ಮಾಡಲಾಗಿದೆ. ಜನತೆಗೆ ನೀಡಿದ ಆಶ್ವಾಸನೆಯಂತೆ ನುಡಿದಂತೆ ನಡೆದಿದ್ದೇವೆ. ರಾಜ್ಯದ 1.20 ಕೋಟಿ ಕುಟುಂಬಗಳು ಮಾಸಿಕ ₹4-5 ಸಾವಿರ ಬರುವ ಆದಾಯದಿಂದ ಕುಟುಂಬದ ಭದ್ರತೆ ಕಾಣುವಂತಾಗಿದೆ. ಇಂತಹ ಯೋಜನೆಯನ್ನು ದೇಶದ ಯಾವ ಸರ್ಕಾರವೂ ಮಾಡಿಲ್ಲ ಎಂದರು.ಕೊಪ್ಪಳ ಲೋಕಸಭೆ ಅಭ್ಯರ್ಥಿ ಆಯ್ಕೆಯ ಬಗ್ಗೆ ಪಕ್ಷದ ವರಿಷ್ಠರು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಇಲ್ಲಿ ಮೂರು ಹೆಸರುಗಳು ಕೇಳಿ ಬಂದಿದ್ದು, ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಹಾಗೂ ಜನಾಭಿಪ್ರಾಯದ ಹಾಗೂ ಗೆಲ್ಲುವಂತಹ ಅರ್ಹತೆ ಆಧಾರದಲ್ಲಿ ಟಿಕೆಟ್ ನೀಡಲಾಗುವುದು. ಅಂತಿಮ ಆಯ್ಕೆಯನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಬ್ಲಾಕ್ ಅಧ್ಯಕ್ಷ ಚಂದ್ರು ನಾಲತವಾಡ, ಮಾಲತಿ ನಾಯಕ, ಮುಕುಂದರಾವ ಭವಾನಿಮಠ, ಶಾರದಾ ಕಟ್ಟಿಮನಿ, ಅಮರೇಗೌಡ ಜಾಲಿಹಾಳ, ಇಮಾಮಸಾಬ ಗರಡಿಮನಿ ಇದ್ದರು.

Share this article